ಪ್ರತಿ ಶನಿವಾರ ಕಲೆಕ್ಷನ್‌ಗಾಗಿ ಚಲುವರಾಯಸ್ವಾಮಿ ಬರ್ತಾರೆ

| Published : Nov 12 2023, 01:00 AM IST

ಪ್ರತಿ ಶನಿವಾರ ಕಲೆಕ್ಷನ್‌ಗಾಗಿ ಚಲುವರಾಯಸ್ವಾಮಿ ಬರ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಶನಿವಾರ ಕಲೆಕ್ಷನ್‌ಗಾಗಿ ಚಲುವರಾಯಸ್ವಾಮಿ ಬರ್ತಾರೆ- ಮಾಜಿ ಶಾಸಕ ಕೆ.ಸುರೇಶ್‌ಗೌಡ ಗಂಭೀರ ಆರೋಪ- ಜಮೀನುಗಳ ಬಳಿ ಹೋಗಿ ರೈತರ ಕಷ್ಟ ಕೇಳಿದ್ದಾರಾ?

- ಮಾಜಿ ಶಾಸಕ ಕೆ.ಸುರೇಶ್‌ಗೌಡ ಗಂಭೀರ ಆರೋಪ

- ಜಮೀನುಗಳ ಬಳಿ ಹೋಗಿ ರೈತರ ಕಷ್ಟ ಕೇಳಿದ್ದಾರಾ?ಕನ್ನಡಪ್ರಭ ವಾರ್ತೆ ನಾಗಮಂಗಲ

ಪ್ರತಿ ಶನಿವಾರ ಚಲುವರಾಯಸ್ವಾಮಿ ನಾಗಮಂಗಲಕ್ಕೆ ಬರೋದು ಕಲೆಕ್ಷನ್‌ಗೋಸ್ಕರವೇ ಹೊರತು ಜನರ ಸಮಸ್ಯೆ ಪರಿಹಾರಕ್ಕಲ್ಲ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಗಂಭೀರ ಆರೋಪ ಮಾಡಿದರು.

ಜೆಡಿಎಸ್‌ ಬರ ಅಧ್ಯಯನ ರಾಜಕೀಯ ತೀಟೆ ಎಂಬ ಸಚಿವ ಚಲುವರಾಯಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅವರು, ಪ್ರತಿ ಶನಿವಾರ ಕಲೆಕ್ಷನ್ ಮಾಡುವ ಸಲುವಾಗಿಯೇ ಚಲುವರಾಯಸ್ವಾಮಿ ನಾಗಮಂಗಲಕ್ಕೆ ಬರೋದು. ಪ್ರತಿ ಶನಿವಾರ ತಾಲೂಕಿನಲ್ಲಿ ಎಲ್ಲಾ ಇಲಾಖೆಗಳಿಂದ ಕಲೆಕ್ಷನ್ ನಡೆಯುತ್ತದೆ. ಕಾಮಗಾರಿಗಳಿಂದ ಸಚಿವರ ಬೆಂಬಲಿಗರು ಕಮಿಷನ್ ಕಲೆಕ್ಷನ್ ಮಾಡುತ್ತಾರೆ. ಅದನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಪ್ರತಿ ಶನಿವಾರ ಚಲುವರಾಯಸ್ವಾಮಿ ನಾಗಮಂಗಲಕ್ಕೆ ಬರುತ್ತಾರೆ ಎಂದು ಆರೋಪಿಸಿದರು.

ಅಷ್ಟಕ್ಕೂ ಬರ ಬಂದಿರೋದು ರೈತರಿಗೆ ಹೊರತು ಚಲುವರಾಯಸ್ವಾಮಿಗಲ್ಲ. ವಿದ್ಯುತ್ ಅಭಾವದಿಂದ ರೈತರು ಬೆಳೆಯಲು ಆಗುತ್ತಿಲ್ಲ. ಬೆಳೆಗಳಿಗೆ ನೀರು ಹರಿಸಲು ಪರದಾಡುವಂತಾಗಿದೆ. ಯಾವ ರೈತರ ಜಮೀನುಗಳ ಬಳಿ ಹೋಗಿ ಅವರ ಕಷ್ಟ-ಸುಖ ವಿಚಾರಿಸಿದ್ದಾರೆ. ನಮ್ಮ ಬರ ಅಧ್ಯಯನವನ್ನ ರಾಜಕಾರಣ ಅಂತಾರೆ. ಕೃಷಿ ಸಚಿವರಾಗಿ ವಾಸ್ತವ ಅರಿಯದೆ ಇರುವುದು ದುರದೃಷ್ಟಕರ ಎಂದು ಟೀಕಿಸಿದರು.

ಗೆದ್ದ ಬಳಿಕ ಇವರ ವರದಿಯೇ ಕರೆಕ್ಟ್ ಎಂದು ಹೇಳಲು ಆಗುವುದಿಲ್ಲ. ವಿರೋಧ ಪಕ್ಷದವರಾಗಿ ನಾವು ಸಲಹೆ ಕೊಡುತ್ತೇವೆ. ಸ್ವೀಕರಿಸುವುದು, ಬಿಡೋದು ಅವರಿಗೆ ಬಿಟ್ಟ ವಿಚಾರ. ನಮ್ಮ ಯೋಗ್ಯತೆ ಬಗ್ಗೆ ಮಾತನಾಡಲು ಆತನಿಗೇ ಯೋಗ್ಯತೆ ಇಲ್ಲ ಎಂದು ಜರಿದರು.

ಸಚಿವರು ಜಿಲ್ಲೆಯಲ್ಲಿ ಹಲವೆಡೆ ಜೂಜಾಡಿಸುತ್ತಿದ್ದಾರೆ. ಅದರಿಂದಲೂ ಕಮಿಷನ್ ಬರುತ್ತಿದೆ. ತಿಂಗಳಿಗೆ ಎಷ್ಟು ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಯೋಗ್ಯತೆ ಇದ್ದವರು ಹೇಳಬೇಕು. ನಮ್ಮ ಕಾಲದಲ್ಲಿ ಜೂಜು ನಡೆಯಲು ಬಿಟ್ಟಿರಲಿಲ್ಲ. ಇವತ್ತು ಜನ ಸಾಮಾನ್ಯರು, ಮಹಿಳೆಯರು ರಾಜಕಾರಣಿಗಳಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ಜೂಜಾಡಿ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ‌. ಉಸ್ತುವಾರಿ ಮಂತ್ರಿಗಳ ಗಮನಕ್ಕೆ ಬಾರದೆ ಜೂಜು ನಡೆಯುತ್ತಿಲ್ಲ ಎಂದು ದೂಷಿಸಿದರು.

ಎಸಿ ರೂಂನಲ್ಲಿ ಕುಳಿತು ಬರ ಪರಿಸ್ಥಿತಿಯ ವರದಿ ರೆಡಿ ಮಾಡಬೇಡಿ. ರೈತರ ಬಳಿ ಹೋಗಿ ಸಮಸ್ಯೆ ಆಲಿಸಿ ನೈಜ ವರದಿ ನೀಡಿ. ನಾವು ಅಧ್ಯಯನ ನಡೆಸಿದ ವರದಿಯನ್ನು ನಮ್ಮ ನಾಯಕರಿಗೆ ನೀಡುತ್ತೇವೆ. ಅವರು ಅಧಿವೇಶನದಲ್ಲಿ ಚರ್ಚೆ ಮಾಡುತ್ತಾರೆ. ಕೇಂದ್ರ ಸರ್ಕಾರದ ಜೊತೆ‌ ವಿಶ್ವಾಸ ಉಳಿಸಿಕೊಂಡು ಅನುದಾನ ತರಬೇಕು. ಇವರ ಕೈಲಿ ತರಲಾಗದಿದ್ದರೆ ರಾಜೀನಾಮೆ ಕೊಡಲಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲಿ. ನಾವು ಅನುದಾನ ತರುತ್ತೇವೆ. ಇವರ ಯೋಗ್ಯತೆ ಕೇಂದ್ರದವರಿಗೆ ಗೊತ್ತಾಗಿ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕುಟುಕಿದರು.

ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿಲ್ಲ. ಬರದ ಮಾಹಿತಿ ಅವರ ಬಳಿಯೂ ಇದೆ. ಇವರು ದುಡ್ಡು ಬರಲಿ ಎಂದು ಸಿಕ್ಕಾಪಟ್ಟೆ ಬರೆದುಕೊಂಡು ಹೋದರೆ ಕೊಡಲ್ಲ. ಎನ್‌ಡಿಆರ್‌ಎಫ್ ಬಿಡಿ, ಎಸ್‌ಡಿಆರ್‌ಎಫ್‌ನಡಿ ಯಾಕೆ ಇನ್ನೂ ಪರಿಹಾರ ಕೊಟ್ಟಿಲ್ಲ. ಈ ಸರ್ಕಾರದ ಬಳಿ ದುಡ್ಡಿಲ್ಲ, ಗ್ಯಾರಂಟಿಗಳಿಗೆ ಹಣ ಇಲ್ಲ. ಲೋಕಸಭೆ ಚುನಾವಣೆವರೆಗೆ ಹೇಗೋ ಕಾಲ ತಳ್ಳಬೇಕಿದೆ. ಬರ ಪರಿಹಾರದಲ್ಲಿ ಕಮಿಷನ್ ಹೊಡೆಯುವ ಪ್ಲಾನ್ ಇವರದ್ದಾಗಿದೆ. ಆ ಹಣದಲ್ಲಿ ಎಲೆಕ್ಷನ್ ಮಾಡುವ ಯೋಚನೆಯಲ್ಲಿದ್ದಾರೆ. ಕಳ್ಳರಿಗೆ ಮಹಾರಾಜ ಆದರೇನು ಬಡವ ಆದರೇನು. ಕಿತ್ತು ತಿನ್ನುವುದಷ್ಟೇ ಇವರ ಕೆಲಸ ಎಂದು ಟೀಕಾ ಪ್ರಹಾರ ನಡೆಸಿದರು.