ಆ್ಯಂಕರ್‌...........ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ ಹೆಚ್ಚಿದ ಒತ್ತಡ

| Published : Jan 25 2024, 02:04 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಹಾಲಿ ಅಧ್ಯಕ್ಷರಾಗಿರುವ ಡಾ.ವೇಣುಗೋಪಾಲ್ ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಜಿಲ್ಲಾಧ್ಯಕ್ಷರ ಸ್ವಂತ ಕ್ಷೇತ್ರವಾದ ಶ್ರೀನಿವಾಸಪುರ ಕ್ಷೇತ್ರದಲ್ಲಿಯೂ ಪಕ್ಷ ನೆಲ ಕಚ್ಚಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಹಾಲಿ ಸಂಸದ ಎಸ್. ಮುನಿಸ್ವಾಮಿ ರವರಿಗೆ ಮತ್ತೆ ಟಿಕೆಟ್ ಕೊಡಬಾರದೆಂದು ಒಂದು ಗುಂಪು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಮತ್ತೊಂದು ಕಡೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಯ ಬಗ್ಗೆಯೂ ಅಪಸ್ವರ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಜಿಲ್ಲಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಾಗಿದ್ದು ಲೋಕಸಭೆ ಚುನಾವಣೆ ಒಳಗೆ ಜಿಲ್ಲಾಧ್ಯಕ್ಷರನ್ನು ಮತ್ತೆ ಬದಲಾಯಿಸಲಾಗುವುದು ಎಂಬ ಕೂಗು ದಟ್ಟವಾಗಿ ಹರಡಿದೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಆಯಾ ಕ್ಷೇತ್ರದ ಜಿಲ್ಲಾಧ್ಯಕ್ಷರು ಪಕ್ಷವನ್ನು ಸಂಘಟನೆ ಮಾಡಿ ಮುನ್ನೆಡೆಸುವ ಸಾಮರ್ಥ್ಯ ಹೊಂದಿರಬೇಕು ಎಂಬುದು ರಾಜ್ಯಧ್ಯಕ್ಷರ ನಿಲುವು. ಆದರೆ ಕೋಲಾರ ಜಿಲ್ಲೆಯಲ್ಲಿ ಹಾಲಿ ಅಧ್ಯಕ್ಷರಾಗಿರುವ ಡಾ.ವೇಣುಗೋಪಾಲ್ ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಜಿಲ್ಲಾಧ್ಯಕ್ಷರ ಸ್ವಂತ ಕ್ಷೇತ್ರವಾದ ಶ್ರೀನಿವಾಸಪುರ ಕ್ಷೇತ್ರದಲ್ಲಿಯೂ ಪಕ್ಷ ನೆಲ ಕಚ್ಚಿದೆ.

ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಸ್ಥಿತಿ ಈಗ ಅಯೋಮಯವಾಗಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಜಿಲ್ಲಾಧ್ಯಕ್ಷ ಸ್ಥಾನವನ್ನು ಒಬ್ಬ ನಿಷ್ಠಾವಂತ ಗ್ರಾಮ ಮಟ್ಟದಿಂದ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟನೆ ಮಾಡುವ ಶಕ್ತಿ ಹೊಂದಿರುವ ವ್ಯಕ್ತಿಗೆ ಕೊಡಬೇಕು. ಡಾ.ವೇಣುಗೋಪಾಲ್‌ರನ್ನೇ ಎರಡನೇ ಅವಧಿಗೆ ಜಿಲ್ಲಾಧ್ಯಕ್ಷರಾಗಿ ಮುಂದುವರೆಸಿರುವುದನ್ನು ವಿರೋಧಿಸಿ ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಗಮನಕ್ಕೂ ತರಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ?

ಎಲ್ಲಾ ಅಂದುಕೊಂಡಂತೆ ನಡೆದರೆ ಒಂದು ತಿಂಗಳಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಯಾಗುವುದರಲ್ಲಿ ಅನುಮಾನವಿಲ್ಲ, ಹಾಲಿ ಅಧ್ಯಕ್ಷ ಡಾಃವೇಣುಗೋಪಾಲ್ ಸ್ಥಾನಕ್ಕೆ ಕೆ.ಚಂದ್ರಾರೆಡ್ಡಿ ನೇಮಕವಾಗುವುದು ಖಚಿತ ಎನ್ನಲಾಗಿದೆ. ಕೆ. ಚಂದ್ರಾರೆಡ್ಡಿ ಈಗಾಗಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಿದ್ದರು. ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿ ಒಳಜಗಳದಿಂದ ಬೇಸತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

ಬಿಜೆಪಿಯಲ್ಲೂ ಚಂದ್ರಾರೆಡ್ಡಿಗೆ ಯಾವುದೇ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಲಾಗಿದೆ ಎಂಬ ಆರೋಪಿ ಕೇಳಿಬರುತ್ತಿದೆ. ಈಗ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕೆ.ಚಂದ್ರಾರೆಡ್ಡಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಈ ಹಿಂದೆ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಮಾಡಿದಂತೆ ಬಿಜೆಪಿ ಸಂಘಟನೆಗೂ ಬಲ ತುಂಬಲು ಅವಕಾಶ ನೀಡಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದ ಜಿಲ್ಲಾಧ್ಯಕ್ಷರನ್ನು ಬದಲಾಯಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.