ಸಾರಾಂಶ
ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಅಭ್ಯರ್ಥಿ ಕುರಿತು ಈವರೆಗೆ ಯಾವುದೇ ರೀತಿಯಲ್ಲೂ ಚರ್ಚೆಯಾಗಿಲ್ಲ. ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರ ಜತೆ ಚಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ತಮ್ಮ ಸ್ಪರ್ಧೆಗೆ ಜೆಡಿಎಸ್ ಕೂಡ ಸಮ್ಮತಿಸಿದೆ ಎಂಬ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಹೇಳಿಕೆ ಬೆನ್ನಲ್ಲೇ, ಇಂಥ ಹೇಳಿಕೆಯನ್ನು ನೀಡುವ ಮೂಲಕ ಕುಮಾರಸ್ವಾಮಿ ಅವರು ಯೋಗೇಶ್ವರ್ ಹೇಳಿಕೆಯನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.ಶನಿವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಉಪಚುನಾವಣಾ ವಿಚಾರವಾಗಿ ಮಿತ್ರ ಪಕ್ಷಗಳ ನಡುವೆ ಚರ್ಚೆಯಾಗಿಲ್ಲ. ಬಿಜೆಪಿ ಹೈಕಮಾಂಡ್ ಜತೆಗೂ ಯಾವುದೇ ಮಾತುಕತೆ ನಡೆದಿಲ್ಲ. ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯಾವಕಾಶ ಇದೆ. ಉಪಚುನಾವಣೆ ಘೋಷಣೆ ಬಳಿಕ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂದರು.
ಮಾಧ್ಯಮಗಳು ತಮಗೆ ಇಷ್ಟಬಂದವರ ಹೆಸರನ್ನು ಹರಿಬಿಡುತ್ತಿವೆ. ಈ ಮೊದಲು ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ವರದಿ ಬಿತ್ತರಿಸಿದವು. ಈಗ ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ನಿ ಅನಸೂಯ ಹೆಸರನ್ನು ಹರಿಬಿಟ್ಟಿವೆ. ಈ ಬಗ್ಗೆ ಮಾಧ್ಯಮಗಳೇ ತೀರ್ಮಾನಿಸುತ್ತಿವೆ. ಆದರೆ, ವಾಸ್ತವವಾಗಿ ಬಿಜೆಪಿ-ಜೆಡಿಎಸ್‌ನಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.