ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ : ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

| Published : Jan 04 2025, 12:33 AM IST / Updated: Jan 04 2025, 04:23 AM IST

Prathap Simha

ಸಾರಾಂಶ

ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ. ನಾಳೆ ಬೆಳಗ್ಗೆ ಚುನಾವಣೆ ನಡೆದರೂ ನೀವು ನಿರ್ನಾಮ ಆಗುತ್ತೀರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

  ಮೈಸೂರು : ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ. ನಾಳೆ ಬೆಳಗ್ಗೆ ಚುನಾವಣೆ ನಡೆದರೂ ನೀವು ನಿರ್ನಾಮ ಆಗುತ್ತೀರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ಪಡೆಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಗರದಲ್ಲಿ ಶುಕ್ರವಾರ ಕಿಡಿಕಾರಿದ ಅವರು, ಮೊದಲು ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು. ಭಂಡತನದಿಂದ ಮುಂದುವರೆದರೆ ಅವರ ಸಚಿವರು ಸಹ ಭಂಡತನ ಪ್ರದರ್ಶನ ಮಾಡುತ್ತಾರೆ. ರಾಜ್ಯವನ್ನು ಲೂಟಿ ಮಾಡುತ್ತಾರೆ. ಎಲ್ಲರೂ ಅಂಗಡಿ ತೆಗೆದು ಲೂಟಿ ಮಾಡುತ್ತಾರೆ. ಸಿಎಂಗೆ ಲಜ್ಜೆ ಇಲ್ಲ ಅಂದ ಮೇಲೆ ಅವರ ಸಚಿವರಿಗೆ ಲಜ್ಜೆ ಇರುತ್ತಾ ಎಂದು ಪ್ರಶ್ನಿಸಿದರು.

ಹಿಟ್ ಅಂಡ್ ರನ್ ರೀತಿಯಲ್ಲಿ ಪ್ರಿಯಾಂಕ್ ಖರ್ಗೆಯದ್ದು ಸ್ಲ್ಪಿಟ್ ಅಂಡ್ ರನ್. ಉಗಿದು ಓಡಿ ಹೋಗುವುದು ಪ್ರಿಯಾಂಕ್ ಖರ್ಗೆ ಕೆಲಸ. ಈಶ್ವರಪ್ಪ ವಿಚಾರ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದೀರಿ, ನಿಮ್ಮ ಸಚಿವರ ಪಿಎಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದಕ್ಕೆ ಸಾಕ್ಷಿ ಕೇಳುತ್ತೀರಾ. ನೀವು ನಿಮ್ಮ ಆರೋಪಗಳಿಗೆ ಸಾಕ್ಷಿ ಕೊಟ್ಟಿದ್ರಾ?, ಈಗ ಮಾತ್ರ ಸಾಕ್ಷಿ ಕೇಳುವುದು ಎಷ್ಟು ಸರಿ ಎಂದು ಅವರು ಕಿಡಿಕಾರಿದರು.

ದರೋಡೆ ಮಾಡಿ ಕೊಡುವ ನಾಟಕ:

ಬಸ್ ಪ್ರಯಾಣ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಪಂಚ ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದರು. ಹೆಂಡತಿಗೆ ಕೊಟ್ಟು ಗಂಡನಿಂದ ಕಿತ್ತುಕೊಂಡು ಮೋಸ ಮಾಡಿದರು. ಈ ಸರ್ಕಾರ ಒಂದು ಕಡೆ ದರೋಡೆ ಮಾಡಿ, ಮತ್ತೊಂದು ಕಡೆ ಕೊಡುವ ನಾಟಕ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಗೃಹಲಕ್ಷ್ಮೀಗೆ ಎರಡು ಸಾವಿರ ಕೊಟ್ಟು, ಮದ್ಯಪಾನದಲ್ಲಿ ಡಬಲ್ ವಸೂಲಿ ಮಾಡಿದರು. ಯುವನಿಧಿಯನ್ನು ಕೊಡಲೇ ಇಲ್ಲ. ಜಾತಿ ಜಾತಿ ನಡುವೆ ತಂದು ಹಾಕುತ್ತಿದ್ದಾರೆ. ವಿಷಯಾಂತರ ಮಾಡಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.