ಚಿಕ್ಕಬಳ್ಳಾಪುರ: ಶೇ 96.91 ರಷ್ಟು ಮತದಾನ

| Published : Jun 04 2024, 12:30 AM IST / Updated: Jun 04 2024, 04:48 AM IST

ಸಾರಾಂಶ

ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್‌ನ ಡಿ.ಟಿ.ಶ್ರೀನಿವಾಸ್, ಪಕ್ಷೇತರರಾಗಿ ವಿನೋದ್‌ ಶಿವರಾಜ್‌, ಲೋಕೇಶ್ ತಾಳಿಕಟ್ಟೆ ಸ್ಪರ್ಧಿಗಳು.

 ಚಿಕ್ಕಬಳ್ಳಾಪುರ :  ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ರವರೆಗೆ ಶಾಂತಿಯುತವಾಗಿ ಮತದಾನನಡೆದು ಶೇ 96.91 ರಷ್ಟು ಮತದಾನವಾಗಿದೆ.

ಮತದಾನವು ಬೆಳಗ್ಗೆ 8 ಗಂಟೆ ಪ್ರಾರಂಭವಾದಾಗ ತುಂಬಾ ನೀರಸವಾಗಿತ್ತು.ಆದರೆ 11 ಗಂಟೆಯ ನಂತರ ಬಿರುಸು ಗೊಂಡು ಮುಕ್ತಾಯದ ವೇಳೆಗೆ ಶೇ 96.91 ರಷ್ಟು ಮತಚಲಾವಣೆ ನಡೆದಿದೆ.

ಜಿಲ್ಲೆಯಲ್ಲಿ ಒಟ್ಟು 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಗೌರಿಬಿದನೂರು, ಮಂಚೇನಹಳ್ಳಿ, ಬಾಗೇಪಲ್ಲಿ, ಚೇಳೂರು, ಗುಡಿಬಂಡೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ತಲಾ ಒಂದು ಮತಗಟ್ಟೆ ಹಾಗೂ ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲ್ಲೂಕಿನಲ್ಲಿ ತಲಾ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಗೌರಿಬಿದನೂರು ಮತಗಟ್ಟೆಯಲ್ಲಿ ಶೇ.97.41, ಮಂಚೇನಹಳ್ಳಿ ಮತಗಟ್ಟೆಯಲ್ಲಿ ಶೇ. 98.65, ಬಾಗೇಪಲ್ಲಿ ಮತಗಟ್ಟೆಯಲ್ಲಿ ಶೇ. 96.01, ಚೇಳೂರು ಮತಗಟ್ಟೆಯಲ್ಲಿ ಶೇ. 98.25, ಗುಡಿಬಂಡೆ ಮತಗಟ್ಟೆಯಲ್ಲಿ ಶೇ.98.18, ಶಿಡ್ಲಘಟ್ಟ ಮತಗಟ್ಟೆಯಲ್ಲಿ ಶೇ. 96.69, ಚಿಕ್ಕಬಳ್ಳಾಪುರ ತಾಲ್ಲೂಕಿನ

26ನೇ ಮತಗಟ್ಟೆಯಲ್ಲಿ ಶೇ. 96.96 ಮತ್ತು 26 ಎ ಮತಗಟ್ಟೆಯಲ್ಲಿ 97.14, ಚಿಂತಾಮಣಿ ತಾಲ್ಲೂಕಿನ 28ನೇ ಮತಗಟ್ಟೆಯಲ್ಲಿ ಶೇ. 98.09 ಹಾಗೂ 28 ಎ ಮತಗಟ್ಟೆಯಲ್ಲಿ ಶೇ. 94.89 ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ 2,219 ಪುರುಷ ಮತದಾರರು, 1,541 ಮಹಿಳಾ ಮತದಾರರು ಸೇರಿದಂತೆ ಒಟ್ಟು 3,760 ಮತದಾರರಿದ್ದಾರೆ. ಇವರಲ್ಲಿ 2,152 ಪುರುಷ ಮತದಾರರು, 1,492 ಮಹಿಳಾ ಮತದಾರರು. ಒಟ್ಟು 3,644 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ದ್ವೈವಾರ್ಷಿಕ ಚುನಾವಣೆಯ ಕಾವು ಜೋರಾಗಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಶಿಕ್ಷಕ ಮತದಾರರ ಮನಗೆಲ್ಲಲು ನಾನಾ ಕಸರತ್ತು ನಡೆಸಿದ್ದರು. ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಸೇರಿದಂತೆ ಐದು ಜಿಲ್ಲೆಗಳು ಸೇರಿವೆ. ಒಟ್ಟು ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಅವರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ ನಿಂದ ಡಿ.ಟಿ.ಶ್ರೀನಿವಾಸ್, ಪಕ್ಷೇತರರಾಗಿ ವಿನೋದ್‌ ಶಿವರಾಜ್‌,ಲೋಕೇಶ್ ತಾಳಿಕಟ್ಟೆ ಪ್ರಮುಖರಾಗಿದ್ದಾರೆ.