ಸಾರಾಂಶ
ಚಳಿಗಾಲ ಅಧಿವೇಶನದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಧ್ವನಿ ಎತ್ತದ ಶಾಸಕರ ವಿರುದ್ಧ ರೈತಸಂಘ ಕಿಡಿ
ಕನ್ನಡಪ್ರಭ ವಾರ್ತೆ ಮುಳಬಾಗಿಲುಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೇ ಇದ್ದರೆ ಡಿ.೧೩ ಬುಧವಾರ ಎಲ್ಲಾ ಜನಪ್ರತಿನಿಧಿಗಳ ಮನೆ ಮುಂದೆ ಮೆಣಸಿನಕಾಯಿ ಹೊಗೆ ಹಾಕಿ ಚಳವಳಿ ನಡೆಸುವುದಾಗಿ ನಗರ ಹೊರವಲಯದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ತೀವ್ರ ಬರಗಾಲ ಹಾಗೂ ಬೆಳೆ ನಷ್ಟದಿಂದ ರೈತರು ತತ್ತರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವು, ನೀರಿಲ್ಲದೆ ಪರದಾಡುವಂತಾಗಿದೆ. ಲಕ್ಷಾಂತರ ರು. ಬಂಡವಾಳ ಹಾಕಿ ಬೆಳೆದ ಟೊಮೆಟೊಗೆ ಬಿಂಗಿರೋಗ ಹಾಗೂ ಆಲೂಗಡ್ಡೆ ಗಡ್ಡೆಯೇ ಬಿಡದೆ ನೂರಾರು ಹೆಕ್ಟೇರ್ ಬೆಳೆ ನಾಶವಾಗಿದ್ದರೂ ಸಮಸ್ಯೆಯನ್ನು ಸದನದಲ್ಲಿ ಗಂಭೀರವಾಗಿ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲವಾಗಿದ್ದಾರೆಂದು ಎಂದು ಆರೋಪಿಸಿದರು.ನೂರಾರು ಕೋಟಿ ರೈತರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದನ್ನು ಬಿಟ್ಟು, ಜಿಲ್ಲೆಯ ಯುವಜನತೆ ಹಾದಿ ತಪ್ಪುತ್ತಿರುವ ಡ್ರಗ್ಸ್, ಗಾಂಜಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಔಷಧಿ ನಿಯಂತ್ರಣಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ದಿನದ ೨೪ ಗಂಟೆ ಡಾಬಾ, ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆ ಬಗ್ಗೆ ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಬರ ಹಾಗೂ ಬೆಳೆ ನಷ್ಟದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಲ್ಲೆಯ ರೈತರ ಹಿತ ಕಾಯಬೇಕಾದ ಬಂಗಾರಪೇಟೆ ಶಾಸಕರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.ಎಲ್ಲಾ ಶಾಸಕರೂ ಸರ್ಕಾರದ ಮೇಲೆ ಒತ್ತಡ ಹಾಕಿ ಎಪಿಎಂಸಿ ಕಾಯಿದೆ ತಿದ್ದುಪಡಿ ಮಾಡದಂತೆ ಧ್ವನಿ ಎತ್ತಬೇಕು. ಮಾರುಕಟ್ಟೆಗೆ ಅವಶ್ಯಕತೆಯಿರುವ ೧೦೦ ಎಕರೆ ಭೂಮಿ ಮಂಜೂರು ಮಾಡಿ ಅಭಿವೃದ್ಧಿಪಡಿಸಬೇಕು. ಬರ ನಿರ್ವಹಣೆಗೆ ಕನಿಷ್ಠ ೧೦೦ ಕೋಟಿ ಅನುದಾನ ಬಿಡುಗಡೆ ಮಾಡಿಸಿ ಬೆಳೆ ನಷ್ಟ ಪರಿಹಾರವಾಗಿ ಪ್ರತಿ ಎಕರೆಗೆ ೨೫ ಸಾವಿರ ಪರಿಹಾರ ನೀಡುವಂತೆ ಮಾಡಲಿ. ಪ್ರತಿ ಪಂಚಾಯಿತಿಗೊಂದು ಗೋಶಾಲೆ ತೆರೆಯುವ ಮುಖಾಂತರ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಅಧಿವೇಶನದಲ್ಲಿ ಧ್ವನಿ ಎತ್ತದೇ ಇದ್ದರೆ ಡಿ.೧೩ ಬುಧವಾರ ಎಲ್ಲಾ ಜನಪ್ರತಿನಿಧಿಗಳ ಮನೆ ಮುಂದೆ ಮೆಣಸಿನಕಾಯಿ ಹೊಗೆ ಹಾಕಿ ಚಳವಳಿ ನಡೆಸುವ ಮೂಲಕ ರೈತ ವಿರೋಧಿ ಧೋರಣೆ ಖಂಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹೆಬ್ಬಣಿ ಆನಂದರೆಡ್ಡಿ, ಭಾಸ್ಕರ್, ರಾಜೇಶ್, ಆದಿಲ್ ಪಾಷ, ವಿಜಯ್ ಪಾಲ್, ಜುಬೇರ್ ಪಾಷ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಗಿರೀಶ್, ರಾಮಸಾಗರ ವೇಣು, ಮಾಸ್ತಿ ವೆಂಕಟೇಶ್, ಯಲ್ಲಣ್ಣ, ಹರೀಶ್ ಇದ್ದರು.