ಸಿಎಂ ಆಪ್ತ ಕೆ. ಮರಿಗೌಡ ಒಬ್ಬ ಬಕ್ರಾ: ಮಾಜಿ ಸಂಸದ ಪ್ರತಾಪ ಸಿಂಹ

| Published : Jul 25 2024, 01:17 AM IST

ಸಾರಾಂಶ

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ. ಶಿಖಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ ಮರೀಗೌಡ. ಅಂತಹ ವ್ಯಕ್ತಿಯನ್ನು ಎಂಡಿಎ ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ನಾನು ಸಂಸದನಾಗಿದ್ದೆ. ಜಿ ಕೆಟಗರಿ ಸೈಟ್ ಗೆ ಕಾನೂನಾತ್ಮಕ ಸಿಆರ್ ಕೊಡಿ ಎಂದು ಕೇಳಿದ್ದೆ. ಜುಜುಬಿ ಶೇ. 25 ರಷ್ಟು ದಂಡ ಉಳಿಸಲು ಹೋಗಿಲ್ಲ. ಕಾನೂನು ರೀತಿ ಇಲ್ಲ ಎಂದು ನಾನೇ ಎಂಡಿಎ ಆಯುಕ್ತರಿಗೆ ಹೇಳಿ ರದ್ದು ಮಾಡಿಸಿದ್ದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಕಾಳಜಿ, ಪ್ರೀತಿಯಿಂದ ನಿವೇಶನ ಹಿಂದಿರುಗಿಸುವಂತೆ ಸಲಹೆ ನೀಡಿದ್ದನ್ನೂ ಅರ್ಥ ಮಾಡಿಕೊಳ್ಳದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರಿಗೌಡನಂತಹ ಬಕ್ರಾಗಳನ್ನು ಸಿಎಂ ಜೊತೆಗಿಟ್ಟುಕೊಂಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಕಟುವಾಗಿ ಟೀಕಿಸಿದರು.

ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಎಂಡಿಎ ವತಿಯಿಂದ 50:50 ಅನುಪಾತದಡಿ ಪಡೆದುಕೊಂಡ ನಿವೇಶನ ಹಿಂದಿರುಗಿಸುವಂತೆ ಹೇಳಿದ್ದೆ. ನಾನು ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಕಾಳಜಿ, ಪ್ರೀತಿ, ಗೌರವದಿಂದ ಸಲಹೆ ಕೊಟ್ಟಿದ್ದೆ. ಅದನ್ನು ಅರ್ಥ ಮಾಡಿಕೊಳ್ಳದೇ ಮರಿಗೌಡನಂತಹ ಬಕ್ರಾಗಳನ್ನು ಜೊತೆಗಿಟ್ಟುಕೊಂಡಿದ್ದೀರಿ ಎಂದು ಮೊದಲಿಸಿದರು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ. ಶಿಖಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ ಮರೀಗೌಡ. ಅಂತಹ ವ್ಯಕ್ತಿಯನ್ನು ಎಂಡಿಎ ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ನಾನು ಸಂಸದನಾಗಿದ್ದೆ. ಜಿ ಕೆಟಗರಿ ಸೈಟ್ ಗೆ ಕಾನೂನಾತ್ಮಕ ಸಿಆರ್ ಕೊಡಿ ಎಂದು ಕೇಳಿದ್ದೆ. ಜುಜುಬಿ ಶೇ. 25 ರಷ್ಟು ದಂಡ ಉಳಿಸಲು ಹೋಗಿಲ್ಲ. ಕಾನೂನು ರೀತಿ ಇಲ್ಲ ಎಂದು ನಾನೇ ಎಂಡಿಎ ಆಯುಕ್ತರಿಗೆ ಹೇಳಿ ರದ್ದು ಮಾಡಿಸಿದ್ದೆ ಎಂದರು.

ನಾನು ಕಟ್ಟಬೇಕಿರುವುದು ಒಂದೆರಡು ಲಕ್ಷ ರೂಪಾಯಿ ದಂಡ. ಅದಕ್ಕೂ ಎಂಡಿಎನ ಕೋಟ್ಯಂತರ ರೂಪಾಯಿಯ 50:50 ಅನುಪಾತದಡಿಯಲ್ಲಿ ನಿವೇಶನ ಹಂಚಿಕೆ ಹಗರಣಕ್ಕೂ ಏನು ಸಂಬಂಧ? ಇಂತಹ ತಿಳಿಗೇಡಿ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಕನಿಷ್ಠ ಜ್ಞಾನವಿಲ್ಲದ ಮರೀಗೌಡ ಒಬ್ಬ ಬಕ್ರಾ. ಇಂತಹ ಬಕ್ರಾಗಳಿಂದಲೇ ಸಿಎಂ ಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ದೂರಿದರು.

ಸಿಆರ್ ಕಾನೂನು ರೀತಿ ಇಲ್ಲದ ಕಾರಣ ನಾನೇ ಅದನ್ನು ರದ್ದು ಮಾಡಿಸಿದ್ದೆ. ಈ ಪ್ರಕರಣಕ್ಕೂ ಮೂರು ನಾಲ್ಕು ಸಾವಿರ ಕೋಟಿ ಹಗರಣಕ್ಕೂ ಏನು ಸಂಬಂಧ? ಸಂಬಂಧವೇ ಇಲ್ಲದ ವಿಚಾರವನ್ನು ಇನ್ನೊಂದಕ್ಕೆ ಹೋಲಿಸಬಾರದು ಎಂಬ ಸಣ್ಣ ಪ್ರಮಾಣದ ಕನಿಷ್ಟ ತಿಳುವಳಿಕೆಯೂ ಇಲ್ಲದ ತಿಳಿಗೇಡಿ ಮರೀಗೌಡ. ಸಿಎಂ ಅವರೇ ನಿಮಗೆ ಬಂದಿರುವ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಿ. 40 ವರ್ಷದ ಸಿದ್ದರಾಮಯ್ಯ ಅವರ ರಾಜಕಾರಣ ನೋಡಿದರೆ ಅವರನ್ನು ಭ್ರಷ್ಟ ಎನ್ನಲು ಸಾಧ್ಯವಿಲ್ಲ ಎಂದರು.

ಈಗ ಸಿದ್ದರಾಮಯ್ಯ ಅವರ ಬಗ್ಗೆಯೂ ಅನುಮಾನ ಶುರುವಾಗಿದೆ. ನಿವೇಶನ ಹಿಂದಕ್ಕೆ ಕೊಟ್ಟು ತನಿಖೆ ಮಾಡಿಸಿ. ಇಲ್ಲದಿದ್ದರೇ ಸಿಎಂ ಕುಟುಂಬದ ಪ್ರಕರಣ ಇಟ್ಟುಕೊಂಡು ಹಲವರು ಬಚಾವ್ ಆಗುತ್ತಾರೆ. 40 ವರ್ಷದಲ್ಲಿ ಕಳಂಕ ಅಂಟಿಸಿ ಕೊಳ್ಳದಿರುವ ನೀವು ಇದ್ಯಾವುದೋ 16 ಸೈಟಿಗಾಗಿ ಕಳಂಕ ಅಂಟಿಸಿಕೊಳ್ಳುತ್ತಿದ್ದೀರಿ. ಇದು ಬೇಕಾ ನಿಮಗೆ? ಮುಂದಿನ ಮೂರುವರೆ ವರ್ಷ ನೀವೇ ಸಿಎಂ ಆಗಿ ಇರುತ್ತೀರಿ. ಇಡೀ ಮೂರುವರೆ ವರ್ಷ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು.

ಹಿಂದೆ ಸಿಎಂ ಆಗಿದ್ದವರ ಆಸ್ತಿ ನೋಡಿದರೆ ಸಿದ್ದರಾಮಯ್ಯ ಅವರ ಆಸ್ತಿ ಏನೂ ಅಲ್ಲ. ಎಂಡಿಎ ಹಗರಣವನ್ನು ಸಂತೋಷ್ ಹೆಗ್ಡೆ, ಕುಮಾರ್ ಅಂತಹ ವ್ಯಕ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಿ. ಮರೀಗೌಡ ದಡ್ಡ ಶಿಖಾಮಣಿ. ನಾನು ಎಂಡಿಎ ನಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಂದು ಸೈಟ್ ಕೊಡಿಸಿದ್ದರೆ, ತೆಗೆದು ಕೊಂಡಿದ್ದರೆ ತೋರಿಸಿ. ನಾನು ಎಂಡಿಎಗೆ ಯಾವಾತ್ತೂ ಕೂಡ ವ್ಯವಹಾರಕ್ಕಾಗಿ ಹೋಗಿಲ್ಲ ಎಂದರು.

ರಾಜಕೀಯದಲ್ಲಿ ಇದೇ ಅಂತಿಮವಲ್ಲ:

ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, ರಾಜಕೀಯದಲ್ಲಿ ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳಬಾರದು. ಹೇಳಿದರೆ ಕೆಲವರು ಅದಕ್ಕೂ ಬೇರೆ ಯೋಜನೆ ಹಾಕಿ ಬಿಡುತ್ತಾರೆ. ತಾಯಿ ಚಾಮುಂಡಿಯೇ ನನಗೆ ಮುಂದಿನ ದಾರಿ ತೋರಿಸುತ್ತಾಳೆ. ನಾನು ಜನರಿಂದ ತಿರಸ್ಕೃತನಾದ ವ್ಯಕ್ತಿಯಲ್ಲ. ಏನೋ ಕೆಲವರಿಂದ ಟಿಕೆಟ್ ತಪ್ಪಿತು. ಹಾಗಂತ ಇದೇ ಅಂತಿಮವಲ್ಲ ಎಂದರು.

ಸಿದ್ದರಾಮಯ್ಯ ಮೂರುವರೆ ವರ್ಷ ಸಿಎಂ ಅಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಿರುತ್ತಾರೆ. ಹೀಗಾಗಿ ನಾನು ಸಹ ಹೇಳಿದೆ ಅಷ್ಟೇ. ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷೀನೆ ನನಗೆ. ಅವರೂ ಕೂಡ ಹಳೇ ಮೈಸೂರು ಭಾಗದವರೆ. ಸಿದ್ದರಾಮಯ್ಯ ಸಹ ಮೈಸೂರಿನವರೆ. ಅವರು ಬೇರೆ ಪಕ್ಷದವರು ಆಗಿರಬಹುದು, ಆದರೆ ಅವರು ಮೈಸೂರಿನವರು ಎಂಬ ಹೆಮ್ಮೆ ಇದೆ ಎಂದು ಅವರು ಹೇಳಿದರು.