ವಿಭೂತಿ ಹಚ್ಚಿ, ಹೂಮಳೆ ಸುರಿಸಿ 301 ಶ್ರೀಗಳಿಂದ ಸಿಎಂಗೆ ಸನ್ಮಾನ

| N/A | Published : Oct 06 2025, 10:04 AM IST

siddaramaiah

ಸಾರಾಂಶ

ಲಿಂಗಾಯತ ಧರ್ಮ ಪರ ನಿಲುವಿನ ಸ್ವಾಮೀಜಿಗಳು ಭಾನುವಾರ ನಗರದಲ್ಲಿ ನಡೆದ ‘ಬಸವ ಸಂಸ್ಕೃತಿ ಅಭಿಯಾನ 2025’ ಸಮಾರೋಪದಲ್ಲಿ ಸಿದ್ದು ಅವರನ್ನು ಹಾಡಿ ಹೊಗಳುವ ಮೂಲಕ ಪರೋಕ್ಷ ಬೆಂಬಲ

  ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಬಲ ಜಾತಿಗಳ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆಯೇ ಪ್ರತ್ಯೇಕ ಲಿಂಗಾಯತ ಧರ್ಮ ಪರ ನಿಲುವಿನ ಸ್ವಾಮೀಜಿಗಳು ಭಾನುವಾರ ನಗರದಲ್ಲಿ ನಡೆದ ‘ಬಸವ ಸಂಸ್ಕೃತಿ ಅಭಿಯಾನ 2025’ ಸಮಾರೋಪದಲ್ಲಿ ಸಿದ್ದು ಅವರನ್ನು ಹಾಡಿ ಹೊಗಳುವ ಮೂಲಕ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು.

ಇದೇ ವೇಳೆ ಸಿದ್ದರಾಮಯ್ಯನವರಿಗೆ ವಿಭೂತಿ ಹಚ್ಚಿ ಹೂಮಳೆ ಸುರಿಸಿದ ಶರಣ ಸಂಸ್ಕೃತಿಯ 301ಕ್ಕೂ ಹೆಚ್ಚು ಸ್ವಾಮೀಜಿಗಳು, ಅವರನ್ನು ಸನ್ಮಾನಿಸಿ ಗೌರವಿಸಿದರು. ಇದು ಪ್ರಬಲ ಲಿಂಗಾಯತ ಸಮುದಾಯ ನಿಮ್ಮೊಂದಿಗಿದೆ ಎಂಬ ಸಂದೇಶ ರವಾನೆಗೆ ಕಾರಣವಾಯಿತು.

ಈ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿ ಮಾತನಾಡಿ, ಮುಂಬರುವ ದಿನಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗುವ ಭರವಸೆ ನಮಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವೆಂದು ಮಾನ್ಯತೆ ನೀಡಿ ಮುದ್ರೆ ಒತ್ತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅಲ್ಲೂ ಮಾನ್ಯತೆ ಸಿಗುವ ಭರವಸೆ ಇದೆ ಎಂದು ಹೇಳಿದರು.

ಸಿದ್ದರಾಮಯ್ಯ ಎದೆ ಸೀಳಿದರೆ ಬಸವಣ್ಣ ಕಾಣುತ್ತಾರೆ. ಅವರೊಬ್ಬ ಕಳಂಕರಹಿತ, ಪ್ರಾಮಾಣಿಕ ರಾಜಕಾರಣಿ. ವಚನ ಸಂವಿಧಾನದ ಮೂಲಕ ಸರ್ಕಾರ ನಡೆಸಿದ ಸಿದ್ದರಾಮಯ್ಯ ಆಡಳಿತದ ಕಾಲವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು. ಈ ಹಿಂದೆ ಸಿದ್ದರಾಮಯ್ಯ ರಾಜ್ಯ ಪ್ರವಾಸ ಮಾಡಿದ್ದು ಬಸವಕಲ್ಯಾಣದಿಂದ ಎಂದು ಸ್ಮರಿಸಿದರು.

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸವ ಚಳವಳಿ ಸೋಲಲ್ಲ, ಸೂರ್ಯ ಚಂದ್ರ ಇರುವವರೆಗೆ ನಿರಂತರವಾಗಿರಲಿದೆ. ಶರಣರು ಬೀದಿಗಿಳಿದು ಬಯಲಾಗಿರುವ ಸಮಾಜವನ್ನು ಕಟ್ಟುವ ಕೆಲಸ ಮಾಡಿದಾಗ ನಮ್ಮ ಚಳವಳಿಗೆ ಅರ್ಥ ಬರಲಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ್‌ ಮಾತನಾಡಿ, ನಾನು ಚಮಚಾಗಿರಿ ಮಾಡುತ್ತಿದ್ದೇನೆ ಎಂದುಕೊಂಡರೂ ಪರವಾಗಿಲ್ಲ. ಸಿದ್ದರಾಮಯ್ಯ ಮಾಡಿದ ಒಳ್ಳೆಯ ಕೆಲಸಗಳನ್ನು ನೆನೆಯುತ್ತೇನೆ. ಧಾರವಾಡ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವ ವಿದ್ಯಾಲಯವೆಂದು ಹೆಸರಿಟ್ಟಿದ್ದು ಸಿದ್ದರಾಮಯ್ಯ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶ ಮಾಡಿದ್ದು ಸಿದ್ದರಾಮಯ್ಯ. ಶಿವಮೊಗ್ಗದ ಉದ್ಯಾನವನಕ್ಕೆ ಅಲ್ಲಮಪ್ರಭು ಉದ್ಯಾನವನ ಎಂದು ಹೆಸರಿಟ್ಟಿದ್ದು ಕೂಡ ಸಿದ್ದರಾಮಯ್ಯ ಎಂದು ಶ್ಲಾಘಿಸಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಅನೇಕ ಲಿಂಗಾಯತ ನಾಯಕರಲ್ಲಿ ಬಸವ ತತ್ವಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ತತ್ವಗಳನ್ನು ಅಳವಡಿಸಿಕೊಂಡು ಸರ್ಕಾರ ನಡೆಸುತ್ತಿದ್ದು, ಅವರೊಂದಿಗೆ ಲಿಂಗಾಯತರು ನಿಲ್ಲಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಸೂಚನೆ ನೀಡಿದ್ದರು. ಅಲ್ಲದೆ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ನಮ್ಮ ಬಸವಧರ್ಮ, ಲಿಂಗಾಯತ ಧರ್ಮವೆಂದು ಪ್ರತಿಪಾದಿಸೋಣ. ಅನ್ಯರನ್ನು ಟೀಕೆ ಮಾಡದೆ ಲಿಂಗಾಯತ ಧರ್ಮವನ್ನು ಪ್ರಸಾರ ಮಾಡುವ ಮೂಲಕ ಜಾಗತಿಕ ಧರ್ಮ ಹಾಗೂ ಬಸವ ಭಾರತಕ್ಕಾಗಿ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ ಮುನ್ನೂರಕ್ಕೂ ಹೆಚ್ಚು ಲಿಂಗಾಯತ ಮಠಗಳ ಸ್ವಾಮೀಜಿಗಳು, ಸಚಿವರಾದ ಕೆ.ಎಚ್‌.ಮುನಿಯಪ್ಪ, ಶರಣಪ್ರಕಾಶ್‌ ಪಾಟೀಲ್‌, ಲಕ್ಷ್ಮಿ ಹೆಬ್ಬಾಳ್ಕರ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಮುಖಂಡರಾದ ಬಿ.ಆರ್‌.ಪಾಟೀಲ್‌, ಅಶೋಕ್‌ ಖೇಣಿ, ಸಾಹಿತಿ ಗೊ.ರು.ಚನ್ನಬಸಪ್ಪ, ವಿಶ್ರಾಂತ ನ್ಯಾ.ಎಚ್‌.ನಾಗಮೋಹನ್‌ದಾಸ್‌, ಮಾತೆ ಗಂಗಾದೇವಿ ಇತರರು ಇದ್ದರು.

ಪಂಚ ನಿರ್ಣಯಗಳು

ಸಮಾವೇಶದಲ್ಲಿ ಆನಂದಪುರದ ಡಾ.ಮಲ್ಲಿಕಾರ್ಜುನ್ ಮುರುಗರಾಜೇಂದ್ರ ಸ್ವಾಮೀಜಿಯವರು ಪಂಚ ನಿರ್ಣಯಗಳನ್ನು ಮಂಡಿಸಿದರು. ಅವು,

- ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರ ಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸಬೇಕು.

- 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ, ಬೌದ್ಧ, ಜೈನ, ಸಿಖ್ಖ್‌ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸಬೇಕು.

- ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭ್ಯುದಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.

- ಪ್ರತಿಯೊಬ್ಬ ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಧಾರಣೆ ಮಾಡಬೇಕು.

- ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.

ಮೆಟ್ರೋಗೆ ಬಸವಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ ಸಿದ್ದು

ಬೆಂಗಳೂರು: ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ’ಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೆಟ್ರೋ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಯೋಜನೆಯಾಗಿದೆ. ನಮ್ಮ ಮೆಟ್ರೋ ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ‘ಬಸವ ಮೆಟ್ರೋ’ ಎಂದು ಘೋಷಿಸಿ ಬಿಡುತ್ತಿದ್ದೆ. ಹಾಗಾಗಿ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದರು. ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Read more Articles on