ಸಾರಾಂಶ
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಬೇಕಾದ ಯೋಜನೆಗಳ ಕುರಿತು ಚರ್ಚಿಸುವ ನೀತಿ ಆಯೋಗದ ಸಭೆಗೆ ಗೈರು ಹಾಜರಾಗುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈಲ್ವೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡದೆ ಕೇಂದ್ರ ಸರ್ಕಾರದ ವಿರುದ್ಧ ಅಸಹಕಾರ ತೋರುತ್ತಿದೆ. ಕಾಂಗ್ರೆಸ್ಸಿನವರು ಅಪಪ್ರಚಾರದಲ್ಲಿ ನಿಸ್ಸೀಮರು. ನಿರಂತರವಾಗಿ ಕೇಂದ್ರದ ಮೇಲೆ ಆಪಾದನೆ ಮಾಡುವುದು ಅವರಿಗೆ ಹವ್ಯಾಸವಾಗಿದೆ. ಅಪಪ್ರಚಾರದ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದ ವಾಗ್ದಾಳಿ ನಡೆಸಿದರು.
ಈ ಬಾರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,329 ಕೋಟಿ ಕೊಟ್ಟಿದ್ದೇವೆ. ಕಳೆದ ಬಾರಿ, ಅದರ ಹಿಂದಿನ ಬಾರಿಯೂ ₹7 ಸಾವಿರ ಕೋಟಿ ಕೊಡಲಾಗಿತ್ತು. ಯುಪಿಎ ಕಾಲದಲ್ಲಿ ವರ್ಷಕ್ಕೆ ಕೇವಲ ₹600 ಕೋಟಿ ಕೊಟ್ಟಿದ್ದರು. ಈಗ ಅದರ 10 ಪಟ್ಟು ಹೆಚ್ಚು ಕೊಟ್ಟರೂ ಕೇಂದ್ರದಿಂದ ಏನೂ ಸಿಗುತ್ತಿಲ್ಲ ಎಂದು ಆರೋಪಿಸುತ್ತಾರೆ. ರಾಜ್ಯ ಸರ್ಕಾರ ತನ್ನ ಪಾಲಿನ ದುಡ್ಡು ಕೊಟ್ಟಿಲ್ಲ. ಭೂ ಸ್ವಾಧೀನ ಮಾಡಿಲ್ಲ. ಕೇಂದ್ರದ ಜತೆಗೆ ಅಸಹಕಾರ ತೋರುತ್ತಿದೆ. ರಾಜ್ಯದ ಬೆಳವಣಿಗೆ, ಅಭಿವೃದ್ಧಿ, ಹಿತ ಕಾಪಾಡಲು ರಾಜ್ಯ ಸರ್ಕಾರ ತಯಾರಿಲ್ಲ ಎಂದರು.