ಸಾರಾಂಶ
ವಿಜಯವಾಡ: ಆಂಧ್ರಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರ ಭರದಿಂದ ನಡೆದಿರುವ ವೇಳೆ, ವಿಜಯವಾಡದಲ್ಲಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇದ್ದ ‘ಮೇಮಂತ ಸಿದ್ದಂ ಬಸ್ ಯಾತ್ರೆ’ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.
ಈ ವೇಳೆ ಜಗನ್ಮೋಹನ ರೆಡ್ಡಿ ಅವರ ಹಣೆಗೂ ಕಲ್ಲು ತಾಗಿದ್ದು, ಅವರಿಗೆ ಸಣ್ಣ ಗಾಯವಾಗಿದೆ.ಇದೇ ವೇಳೆ ಅವರ ಪಕ್ಕದಲ್ಲಿ ನಿಂತಿದ್ದ ಶಾಸಕ ವೆಲ್ಲಂಪಳ್ಳಿ ಅವರ ಎಡಗಣ್ಣಿಗೆ ಗಾಯವಾಗಿದೆ. ಅವರು ವೈದ್ಯಕೀಯ ನಿಗಾದಲ್ಲಿದ್ದಾರೆ.
ವರದಿಯ ಪ್ರಕಾರ, ಜಗನ್ ಬಸ್ ಏರಿದಾಗ ಕಿಡಿಗೇಡಿಗಳು ಕಲ್ಲು ತೂರಿದರು. ಕೂಡಲೇ, ಗಾಯಗೊಂಡ ಜಗನ್ ಬೇಗನೆ ತಮ್ಮ ಬಸ್ ಒಳಗೆ ಬಂದರು ಮತ್ತು ವೈದ್ಯಕೀಯ ತಂಡವು ಅವರಿಗೆ ಪ್ರಥಮ ಚಿಕಿತ್ಸೆ ನೀಡಿತು. ಕಲ್ಲು ತೂರಾಟದ ನಂತರ ಅವರು ಚುರುಕಾಗಿ ಚೇತರಿಸಿಕೊಂಡರು ಮತ್ತು ಬಸ್ ಯಾತ್ರೆಯನ್ನು ಮುಂದುವರೆಸಿದರು. ಜಗನ್ ಕಣ್ಣಿಗೆ ಗಾಯವಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದಕ್ಕೆ ಕಿಡಿಕಾರಿರುವ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ನಾಯಕರು, ಈ ದಾಳಿಯ ಹಿಂದೆ ತೆಲುಗುದೇಶಂ ಪಕ್ಷದ ಕಾರ್ಯಕರ್ತರು ಇದ್ದಾರೆ ಎಂದು ಆರೋಪಿಸಿದ್ದಾರೆ.