ಪೊಲೀಸ್‌ ಅಧಿಕಾರಿಯೊಂದಿಗೆ ಸಿಎಂ ಅಸಭ್ಯ ವರ್ತನೆ : ಆಕ್ರೋಶ

| N/A | Published : Apr 30 2025, 12:32 AM IST / Updated: Apr 30 2025, 09:03 AM IST

ಪೊಲೀಸ್‌ ಅಧಿಕಾರಿಯೊಂದಿಗೆ ಸಿಎಂ ಅಸಭ್ಯ ವರ್ತನೆ : ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್‌ ಅಧಿಕಾರಿಯೊಂದಿಗೆ ಅಸಭ್ಯತನ ಹಾಗೂ ಪಾಕಿಸ್ತಾನಿ ಪ್ರೇಮಿಗಳಂತೆ ವರ್ತಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ನಡೆಯನ್ನು ಖಂಡಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಮಂಗಳವಾರ ಗಾಂಧಿ ಪ್ರತಿಮೆ ಎದುರು ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

 ಚಿಕ್ಕಮಗಳೂರು : ಪೊಲೀಸ್‌ ಅಧಿಕಾರಿಯೊಂದಿಗೆ ಅಸಭ್ಯತನ ಹಾಗೂ ಪಾಕಿಸ್ತಾನಿ ಪ್ರೇಮಿಗಳಂತೆ ವರ್ತಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ನಡೆಯನ್ನು ಖಂಡಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಮಂಗಳವಾರ ಗಾಂಧಿ ಪ್ರತಿಮೆ ಎದುರು ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ಬೆಳಗಾವಿಯ ಸಮಾವೇಶದಲ್ಲಿ ಪೊಲೀಸ್ ವರಿಷ್ಟಾಧಿಕಾರಿಗೆ ಏಕವಚನದಲ್ಲಿ ಸಂಬೋಧಿಸಿ, ಎಎಸ್ಪಿಗೆ ವೇದಿಕೆಯಲ್ಲೇ ಕಪಾಳಮೋಕ್ಷಕ್ಕೆ ಮುಂದಾದ ಮುಖ್ಯಮಂತ್ರಿಗಳು ಕಾನೂನು ಪರಿಪಾಠವನ್ನು ಪೂರೈಸಿ ವಕೀಲರೇ ಅಥವಾ ಸಿಎಂ ಸ್ಥಾನ ಯಾವ ನೈತಿಕತೆಯಿಂದ ಅಲಂಕರಿಸಿದ್ದಾರೆ ಎಂದು ಪ್ರಶ್ನಿಸಿದರು.

ದೇಶಾದ್ಯಂತ ಜನತೆ ಪ್ರವಾಸಿಗರ ಸಾವಿನ ದುಃಖದಿಂದ ಬಳಲುತ್ತಿರುವಾಗ ಪಾಕಿಸ್ತಾನಿ ಪ್ರೇಮಿಗಳಂತೆ ವರ್ತಿಸಿದ ಸಿದ್ದರಾಮಯ್ಯ ನಡೆಯ ವಿರುದ್ಧ ಬಿಜೆಪಿ ಮಹಿಳಾ ಕಾರ್ಯಕರ್ತರು ಸಮಾವೇಶದಲ್ಲಿ ಕಪ್ಪುಪಟ್ಟಿ ಧರಿಸಿ ಧಿಕ್ಕಾರ ಕೂಗಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಸಿಎಂ ಭದ್ರತಾ ಸಿಬ್ಬಂದಿ ಧಾರವಾಡ ಎಎಸ್ಪಿಗೆ ಕೆನ್ನೆಗೆ ಬಾರಿಸಲು ಮುಂದಾಗಿರುವುದು ನಾಚಿಕೇಡಿನ ಸಂಗತಿ ಎಂದರು.

ಸಮಾಜದ ಹಿತ ಕಾಪಾಡುವ ಪೊಲೀಸರು ಅತ್ಯಂತ ಶ್ರೇಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಮನೆ ಜೀತದಾಳಂತೆ ಕೈ ಎತ್ತಲು ಮುಂದಾದ ಸಿದ್ದರಾಮಯ್ಯ, ಅತಿಯಾದ ದುರಂಕಾರ, ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಸಂವಿಧಾನ ವಿರೋಧಿ ನೀತಿ ಅನುಸರಿಸುವ ಜೊತೆಗೆ ದೇಶ ವಿರೋಧಿಗಳಾಗಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ ಸಮಾವೇಶಕ್ಕೆ ಪಂಥಹ್ವಾನ ಸ್ವೀಕರಿಸಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ತಾಕತ್ತಿದ್ದರೆ ತಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸಿಗರು ಕೈಹಾಕಲಿ ಎಂದು ಸವಾಲೊಡ್ಡಿದ ಅವರು ಕೂಡಲೇ ಪೊಲೀಸರು ಸ್ವಯಂ ಪ್ರೇರಿತರಾಗಿ ಸಿಎಂ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಪಂಚ ಶಾಸಕರು, ಕಾಂಗ್ರೆಸ್‌ನಿಂದ ಬಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ರಾಜ್ಯ ಮತ್ತು ಜಿಲ್ಲಾ ಕೇಂದ್ರದಲ್ಲಿ ಅಧಿಕಾರವಿಲ್ಲದ ಸಮಯದಲ್ಲೂ ಸವಾಲೆಸಗಿದ್ದೇವೆ. ಇದೀಗ ಭಾಜಪ ಕೋಟ್ಯಾಂತರ ಕಾರ್ಯಕರ್ತರಿಂದ ಗಟ್ಟಿತನದಿಂದ ಬೆಳೆದಿದ್ದು ಓರ್ವ ಕಾರ್ಯಕರ್ತನಿಗೂ ಮುಟ್ಟುವ ಶಕ್ತಿ ಕಾಂಗ್ರೆಸ್ಸಿಗಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಪ್ರತಿ ಸಂದರ್ಭದಲ್ಲೂ ಹಿಂದೂಗಳನ್ನು ಅಣುಕಿಸುತ್ತಿದೆ. ಅಧಿಕಾರ ದರ್ಪ, ಎಡಪಂಥೀಯ ಚಿಂತನೆಗಳಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಹಾಗೂ ಮತಕ್ಕಾಗಿ ಮುಸ್ಲೀಂನಾಗಿ ಜನಿಸುವೆಂಬ ಹೇಳಿಕೆ ಹಾಗೂ ಡಿಸಿಎಂ ಭಯೋತ್ಪಾದಕರನ್ನು ಬ್ರದರ್ಸ್‌ ಎಂದು ಸಂಬೋಧಿಸುವ ನೀಚಬುದ್ಧಿ, ಹೀನಾಯ ಸ್ಥಿತಿ ತೋರಿಸುತ್ತದೆ ಎಂದರು

ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಮಾತನಾಡಿ, ಪಾಕಿಸ್ತಾನದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರನ್ನು ನಾಡಿನ ಜನತೆ ಸಂತೋಷದಿಂದ ಬೀಳ್ಕೊಟ್ಟು ಪಾಕಿಸ್ತಾನಕ್ಕೆ ಕಳಿಸಿಕೊಡಲಿದೆ. ಆ ದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ ಹಾಗೂ ಅಲ್ಲಿನ ಸರ್ಕಾರವು ಪಾಕಿಸ್ತಾನ ರತ್ನ ಎಂಬ ಬಿರುದು ಕೊಡಲಿದ್ದಾರೆ ಎಂದರು.

ಕೆಲವು ಅಂಣುಬಾಂಬ್‌ಗಳನ್ನು ಶೇಖರಿಸಿರುವ ಪಾಕಿಸ್ತಾನ, ಬೃಹತ್ ಭಾರತಕ್ಕೆ ಸವಾಲೆಸೆಯಲು ಸಾಧ್ಯವಿಲ್ಲ. ಹಾಲಿ ಪಾಕಿಸ್ತಾನ ಸಚಿವ ನೀರಿನ ಸಂಬಂಧ ಇಲ್ಲಸಲ್ಲದ ಹೇಳಿಕೆ ನೀಡಿದ್ದು ಮೋದಿಯವರ ತಂತ್ರ ಅರಿತು ಕುಟುಂಬ ಸಮೇತ ಪರಾರಿಯಾಗಿದ್ದಾನೆ. ಭಾರತದಲ್ಲಿ ಸಾಕಷ್ಟು ಆಯುಧಗಳಿದ್ದು ಸಮಯಕ್ಕಾನುಸಾರ ಒಂದೊಂದೇ ಉಡಾಯಿಸಲು ಸಜ್ಜಾಗಲಿದೆ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಉತ್ತರ ಕರ್ನಾಟಕ ದಕ್ಷ ಅಧಿಕಾರಿಗೆ ಕಪಾಳಮೋಕ್ಷಕ್ಕೆ ಮುಂದಾದ ಸಿದ್ದರಾಮಯ್ಯ ನಡೆ ಸಮಾಜ ತಲೆತಗ್ಗಿಸುವಂಥದ್ದು. ದೇಶವು ನೋವಿನ ಸಾಗರದಲ್ಲಿ ಮುಳುಗಿರುವಾಗ ಮೋದಿ ಟೀಕಿಸುವ ಸಲುವಾಗಿ ದೇಶವಿರೋಧಿ ಹೇಳಿಕೆ ನೀಡಿ ರಾಷ್ಟ್ರಕ್ಕೆ ಅವಮಾನಿಸುತ್ತಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ಕುಮಾ ರ್, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ಸಿ.ಹೆಚ್.ಲೋಕೇಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರಾದ ಸೀತರಾಮ ಭರಣ್ಯ, ಜಸಂತಾ ಅನಿಲ್‌ಕುಮಾರ್, ಬಿ.ರಾಜಪ್ಪ, ನಾರಾಯಣಗೌಡ, ಹೆಚ್.ಕೆ.ಕೇಶವಮೂರ್ತಿ, ಕೋಟೆ ರಂಗನಾಥ್, ನಿಶಾಂತ್, ಸಚಿನ್‌ಗೌಡ, ಪ್ರದೀಪ್, ಚೈತ್ರ ಹಾಗೂ ಕಾರ್ಯಕರ್ತರು ಇದ್ದರು.