ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಸ್ತುತ ದಿನದಲ್ಲಿ ವ್ಯಾಜ್ಯದಾರರು ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆಯುವುದು ದುಬಾರಿಯಾಗಿದ್ದು, ವಕೀಲರು ಕೇವಲ ಶುಲ್ಕ ಪಡೆಯಲು ವಕೀಲಿ ವೃತ್ತಿ ನಡೆಸದೆ, ಕಕ್ಷಿದಾರರ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಮಾಜದಲ್ಲಿನ ಅಸಮಾನತೆ ತೊಲಗಿಸಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ (ಎಎಬಿ) ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕೀಲರ ಶುಲ್ಕ ಹೆಚ್ಚಿರುವುದರಿಂದ ವ್ಯಾಜ್ಯದಾರರು ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆಯುವುದು ದುಬಾರಿಯಾಗಿದೆ. ನಾನು ಯಾವತ್ತೂ ಹಣ ಸಂಪಾದನೆಗೆ ವಕೀಲಿಕೆ ನಡೆಸಲೇ ಇಲ್ಲ. ಅವತ್ತಿನ ತಿಂಡಿ, ಊಟ ಪೂರೈಸಿದರೆ ಸಾಕು. ನಾಳಿನ ಯೋಚನೆಯನ್ನೇ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.ಬಹು ವರ್ಷಗಳಿಂದ ಬೇಡಿಕೆಯಲ್ಲಿದ್ದ ವಕೀಲರ ರಕ್ಷಣಾ ಕಾಯ್ದೆಯನ್ನು ತಮ್ಮ ಅವಧಿಯಲ್ಲಿ ಜಾರಿಗೆ ತರಲಾಗಿದೆ. ಈ ಮೂಲಕ ಅವರಿಗೆ ರಕ್ಷಣೆಯ ಖಾತ್ರಿ ದೊರೆತಿದೆ ಎಂಬ ಸಮಾಧಾನವಿದೆ. ದೇಶ ಹಾಗೂ ನಾಡಿನ ರಕ್ಷಣೆ ವಕೀಲರ ಕೈಯ್ಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡದೇ ಹೋದರೆ ಭಾರಿ ಕಷ್ಟವಾಗುತ್ತದೆ. ವಕೀಲರು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಮತ್ತು ಸಮಾಜದಲ್ಲಿನ ಆರ್ಥಿಕ, ಸಾಮಾಜಿಕ ಅಸಮಾನತೆ ಹೋಗಲಾಡಿಸಬೇಕು ಎಂದು ಕರೆ ನೀಡಿದರು.ಪೂರ್ಣ ವಕೀಲಿಕೆ ಮಾಡಲಿಲ್ಲ:ನಾನು ಪೂರ್ಣ ಪ್ರಮಾಣದಲ್ಲಿ ವಕೀಲಿಕೆ ಮಾಡಲಿಲ್ಲ. ಅರ್ಧ ಕಾಲು ವಕೀಲಿಕೆ; ಇನ್ನರ್ಧ ಕಾಲು ರಾಜಕೀಯದಲ್ಲಿ ಇರಿಸಿದ್ದೆ. ಒಂದು ಬಾರಿ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಆಗಿದ್ದೆ. ವಕೀಲರು ಕೋರ್ಟ್‌ನಲ್ಲಿ ಹೆಚ್ಚು ಮಾತನಾಡಬೇಕು ಎಂದು ನಮ್ಮ ಸೀನಿಯರ್ (ಹಿರಿಯ ವಕೀಲರು) ಯಾವಾಗಲೂ ಹೇಳುತ್ತಿದ್ದರು. ಆದರೆ, ಇವತ್ತು ನಮ್ಮ ಸರ್ಕಾರಿ ವಕೀಲರು ಕೋರ್ಟ್‌ಗಳಲ್ಲಿ ಮಾತೇ ಆಡುವುದಿಲ್ಲ ಎಂಬುದನ್ನು ಕೇಳಿದ್ದೇನೆ ಎಂದು ಹೇಳಿದರು.ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಶಾಸಕ ಎ.ಎಸ್.ಪೊನ್ನಣ್ಣ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಉಪಾಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಖಜಾಂಚಿ ಶ್ವೇತಾ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.