ಪರಿಶಿಷ್ಟರಿಗೆ ಸಿಗದ ಸಿಎಂ ಪಟ್ಟ: ಮಾರಸಂದ್ರ ಮುನಿಯಪ್ಪ

| Published : Nov 06 2023, 12:46 AM IST

ಸಾರಾಂಶ

ಪರಿಶಿಷ್ಟರಿಗೆ ಸಿಗದ ಸಿಎಂ ಪಟ್ಟ: ಮಾರಸಂದ್ರ ಮುನಿಯಪ್ಪರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಜನರಿರುವ ಪರಿಶಿಷ್ಟ ಜನರು

- ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಜನರಿರುವ ಪರಿಶಿಷ್ಟ ಜನರು

- ನಗರದಲ್ಲಿ ಬಿಎಸ್‌ಪಿ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿದ್ದರೂ ಆ ಜನಾಂಗದವರು ಮುಖ್ಯಮಂತ್ರಿಯಾಗಲು ಇದುವರೆಗೂ ಸಾಧ್ಯವಾಗಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪವಿಷಾದಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಪರಿಶಿಷ್ಟವರ್ಗಕ್ಕೆ ಸೇರಿದಜನರಿದ್ದಾರೆ. ಪರಿಶಿಷ್ಟರಿಗಿಂತ ಕಡಿಮೆ ಜನಸಂಖ್ಯೆ ಇರುವ ಒಕ್ಕಲಿಗರು ಎಂಟು ಬಾರಿ ಮುಖ್ಯಮಂತ್ರಿಯಾದರೆ, ಒಮ್ಮೆ ಪ್ರಧಾನಿಯೂ ಆಗಿದ್ದಾರೆ, ಲಿಂಗಾಯುತ ಸಮುದಾಯದವರು 14, ಬ್ರಾಹ್ಮಣರು 4, ಹಿಂದುಳಿದವರು 6 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಒಂದು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿದ ಸಮುದಾಯದ ಧರಂಸಿಂಗ್ ಸಹ ಮುಖ್ಯಮಂತ್ರಿಯಾಗಿದ್ದರು. ಆದರೆ, ಹೆಚ್ಚು ಜನಸಂಖ್ಯೆ ಇರುವ ಪರಿಶಿಷ್ಟರು ಇದುವರೆಗೂ ಮುಖ್ಯಮಂತ್ರಿಯಾಗಿಲ್ಲ ಎಂದು ವಿವರಣೆ ನೀಡಿದರು.

ಉತ್ತರ ಪ್ರದೇಶದಲ್ಲಿ ಬಹುಜನ ಚಳವಳಿ ಪರಿಶಿಷ್ಟ ಸಮುದಾಯದ ಎಲ್ಲ ಪಂಗಡ, ಉಪ ಪಂಗಡಗಳನ್ನು ಒಗ್ಗೂಡಿಸಿ ನಾಲ್ಕು ಬಾರಿ ಮುಖ್ಯಮಂತ್ರಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು ಎಂದರು.

ಈಗಲೂ ರಾಜ್ಯದಲ್ಲಿ ಮೇಲ್ವರ್ಗದ ಅಧಿಕಾರಿಗಳು ಆಯಕಟ್ಟಿನ ಸ್ಥಳದಲ್ಲಿದ್ದಾರೆ, ಸರ್ಕಾರದ 36 ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರು, 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ಇಬ್ಬರು, 31 ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಒಬ್ಬರು ಮಾತ್ರ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಸರ್ಕಾರ ಅಧಿಕಾರಿಗಳ ವಲಯದಲ್ಲೂ ಜಾತಿ ನೋಡುತ್ತಿದೆ ಎಂದರು.

ಸಂಪುಟದಲ್ಲಿ 9 ಸಚಿವರು ಇದ್ದಾರೆ, ಇಬ್ಬರಿಗೆ ಪ್ರಬಲ ಖಾತೆ ಇದೆ, ಇನ್ನುಳಿದ ಸಚಿವರಿಗೆ ಹೇಳಿಕೊಳ್ಳುವಂತ ಖಾತೆ ಕೊಟ್ಟಿಲ್ಲ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಗ್ಯಾರಂಟಿ ಯೋಜನೆಗೆ 11 ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ, ಸಮುದಾಯದ ಶಾಸಕರು ಬಾಯಿ ಮುಚ್ಚಿಕೊಂಡಿದ್ದಾರೆ, ರಾಜ್ಯ ಸರ್ಕಾರಕ್ಕೆ ದಲಿತರ ಕಾಳಜಿ ಇಲ್ಲವಾಗಿದೆ ಎಂದರು.

ಲೋಕಸಭೆ ಚುನಾವಣೆಯನ್ನು ಬಿಎಸ್ಪಿ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಬೂತ್ ಮಟ್ಟದಿಂದ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲಾಗುವುದು ಎಂದರು. ಪಕ್ಷದ ರಾಜ್ಯ ಸಂಯೋಜಕ ಎಂ ಕೃಷ್ಣಮೂರ್ತಿ, ಹ.ರಾ. ಮಹೇಶ್, ಗಂಗಾಧರ್, ಎಂ.ಪಿ.ವೆಂಕಟೇಶ್, ಶಿವಶಂಕರ್,ಚೆಲುವರಾಜ್, ರವಿ ಗೌಡ,ಹಾಡ್ಯ ಉಮೇಶ್, ವೀರಭದ್ರಯ್ಯ, ಲೋಕೇಶ್ ಇತರರಿದ್ದರು.