ನೀತಿ ಆಯೋಗ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು ಕೆಟ್ಟ ಬೆಳವಣಿಗೆ: ಸಚಿವೆ ನಿರ್ಮಲಾ ಸೀತಾರಾಮನ್

| Published : Jul 29 2024, 09:23 AM IST / Updated: Jul 29 2024, 09:24 AM IST

Nirmala Sitharaman

ಸಾರಾಂಶ

ರಾಜ್ಯದ ಬೇಡಿಕೆ, ವಿಚಾರಗಳನ್ನು ಮಂಡಿಸಲು ನೀತಿ ಆಯೋಗದ ಸಭೆಯು ಒಂದು ಉತ್ತಮವಾದ ವೇದಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆಗೆ ಗೈರುಹಾಜರಾಗಿರುವುದು ಕೆಟ್ಟ ಬೆಳವಣಿಗೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ರಾಜ್ಯದ ಬೇಡಿಕೆ, ವಿಚಾರಗಳನ್ನು ಮಂಡಿಸಲು ನೀತಿ ಆಯೋಗದ ಸಭೆಯು ಒಂದು ಉತ್ತಮವಾದ ವೇದಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆಗೆ ಗೈರುಹಾಜರಾಗಿರುವುದು ಕೆಟ್ಟ ಬೆಳವಣಿಗೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಕೇಳಿಸಿಕೊಂಡಿಲ್ಲ ಎನ್ನುವುದನ್ನು ಅನೇಕ ಬಾರಿ ನಾವು ಕೇಳುತ್ತಿರುತ್ತೇವೆ. ಆದರೆ, ಇಂತಹ ಮಹತ್ವದ ಸಂದರ್ಭಗಳು ಬಂದಾಗ ಸದುಪಯೋಗಪಡಿಸಿಕೊಳ್ಳಬೇಕು. ಹಾಜರಾಗದೆ ನಮ್ಮ ಮಾತು ಕೇಳಿಸಿಕೊಂಡಿಲ್ಲ ಎನ್ನುವುದು ಸರಿಯಲ್ಲ. ವಿರೋಧ ಪಕ್ಷಗಳ ಎಲ್ಲಾ ರಾಜ್ಯಗಳ ಮುಖ್ಯಸ್ಥರು ಹಾಜರಾಗಬೇಕಿತ್ತು ಎಂದು ಹೇಳಿದರು.

ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ಕೆಡವುವ ಪ್ರಯತ್ನದ ಆರೋಪಕ್ಕೆ, ಪ್ರತಿಕ್ರಿಯಿಸಿದ ಅವರು, ಚುನಾವಣೆ ಮುಂಚೆಯು ಇದನ್ನೇ ಹೇಳಿದ್ದರು. ಈಗಲೇ ಅದನ್ನೇ ಹೇಳುತ್ತಿದ್ದಾರೆ. ಅಕ್ರಮ ವಹಿವಾಟು ನಡೆದಾಗ ದಾಳಿ ನಡೆಸಬಾರದು ಎಂದರೆ ಹೇಗೆ? ಅವರ ಅವಧಿಯಲ್ಲಿ ತಮ್ಮದೇ ಸಚಿವರ ಬಂಡವಾಳ ಬಯಲಾಗುತ್ತದೆ ಎಂದು ತನಿಖಾ ಸಂಸ್ಥೆಗಳ ಬಾಯಿ ಮುಚ್ಚಿಸಿರಬಹುದು. ಆದರೆ, ನಾವು ಸ್ವಾತಂತ್ರ್ಯ ನೀಡಿದ್ದೇವೆ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್ ಸರ್ಕಾರದ್ದು ಅಭಿವೃದ್ಧಿಗಿಂತ ಟೋಕನಿಸಂ ಮನಸ್ಥಿತಿ. ಬೇಕಾಬಿಟ್ಟಿ ಹಣವನ್ನು ಖರ್ಚು ಮಾಡಿ ವ್ಯವಸ್ಥೆಯನ್ನು ಹಾಳುಗೆಡುವುದು ಆಗಿದೆ. ಅಂತಹ ಕಳಪೆ ಯೋಜನೆಗಳನ್ನು, ಪಾಲಿಸಿಗಳನ್ನು ನಾವು ಅನುಸರಿಸಲು ಆಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವಾಲ್ಮಿಕಿ ಹಗರಣ ಏಕೆ ತಡೆಯಲಿಲ್ಲ

ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ನೀವು, ನಿಮ್ಮ ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಏಕೆ ತಡೆದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಭಾನುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪರಿಶಿಷ್ಟರ ಅಭಿವೃದ್ಧಿಯ ಹಣವನ್ನು ಸರ್ಕಾರದ ಖಾತೆಯಿಂದ ನೇರವಾಗಿ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳನ್ನು ಈಗ ದೂರುವ ಬದಲು ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡುವಾಗಲೇ ಹಿಡಿದು ಏಕೆ ಕ್ರಮ ಕೈಗೊಳ್ಳಲಿಲ್ಲವೇಕೆ ಎಂದರು.

ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವುದಕ್ಕೆ ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಕೇಳಿದ್ದಾರೆ. ಅವರಿಗೆ ಒಳ್ಳೆಯ ಆಡಳಿತಕ್ಕಿಂತ ಜನರನ್ನು ಮರಳು ಮಾಡುವ ಇಂತಹ ಬಣ್ಣ ಬಣ್ಣದ ಮಾತುಗಳೇ ಬಂಡವಾಳ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿದ್ದ ಅವರು, ಸದನದಲ್ಲಿ 89 ಕೋಟಿ ರು. ಹಗರಣ ಎಂದು ಒಪ್ಪಿಕೊಂಡರು. ಆದರೂ, ತಪ್ಪು ನಡೆದಿಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು, ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಅಕ್ರಮಕ್ಕೆ ಕೈಜೋಡಿಸಿದ ಬ್ಯಾಂಕ್‌ ಅಧಿಕಾರಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸೀತಾರಾಮನ್ ಹೇಳಿದರು.