ಸಾರಾಂಶ
ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಕಾಫಿ-ಟೀ ಕುಡಿಯುವುದಕ್ಕಾಗಿ ಪದೇಪದೆ ಹೊರ ಹೋಗುವುದನ್ನು ತಪ್ಪಿಸಲು ಸದನದೊಳಗೇ ಕಾಫಿ-ಟೀ ವ್ಯವಸ್ಥೆ ಮಾಡಲು ಸ್ಪೀಕರ್ ಯು.ಟಿ. ಖಾದರ್ ನಿರ್ಧರಿಸಿದ್ದಾರೆ.
ವಿಧಾನಸಭೆ : ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಕಾಫಿ-ಟೀ ಕುಡಿಯುವುದಕ್ಕಾಗಿ ಪದೇಪದೆ ಹೊರ ಹೋಗುವುದನ್ನು ತಪ್ಪಿಸಲು ಸದನದೊಳಗೇ ಕಾಫಿ-ಟೀ ವ್ಯವಸ್ಥೆ ಮಾಡಲು ಸ್ಪೀಕರ್ ಯು.ಟಿ. ಖಾದರ್ ನಿರ್ಧರಿಸಿದ್ದಾರೆ.
ಈ ಕುರಿತಂತೆ ಬುಧವಾರ ಭೋಜನ ವಿರಾಮದ ಸಂದರ್ಭದಲ್ಲಿ ವಿಧಾನಸಭೆ ಮೊಗಸಾಲೆಯಲ್ಲಿದ್ದ ಶಾಸಕರೊಂದಿಗೆ ಚರ್ಚಿಸಿದ ಯು.ಟಿ.ಖಾದರ್, ಕಲಾಪದಲ್ಲಿ ಶಾಸಕರು ಪೂರ್ಣಪ್ರಮಾಣದಲ್ಲಿ ಭಾಗಿಯಾಗುವಂತೆ ಮಾಡಲು ಸದನದೊಳಗೆ ಶಾಸಕರ ಆಸನದ ಬಳಿಯೇ ಕಾಫಿ-ಟೀ ತಂದು ಕೊಡುವಂತಹ ವ್ಯವಸ್ಥೆ ಮಾಡುತ್ತೇನೆ ಎಂದರು.
ಅದಕ್ಕೆ ಸಮ್ಮತಿಸಿದ ಶಾಸಕರು, ಕಾಫಿ-ಟೀ ಜತೆಗೆ ಬಿಸ್ಕೆಟ್ ನೀಡುವಂತೆಯೂ ಬೇಡಿಕೆ ಇಟ್ಟರು. ಆದರೆ, ಅದಕ್ಕೆ ಮೊದಲು ಕಾಫಿ-ಟೀ ಕೊಡುವುದನ್ನು ಆರಂಭಿಸೋಣ. ಆನಂತರ ಬಿಸ್ಕೆಟ್ ಕೊಡುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ದಿನದಿಂದ ದಿನಕ್ಕೆ ಶಾಸಕರಿಗಾಗಿ ವಿನೂತನ ವ್ಯವಸ್ಥೆ ಮಾಡುತ್ತಿರುವ ಸ್ಪೀಕರ್ ಯು.ಟಿ. ಖಾದರ್, ಶಾಸಕರ ವಿಶ್ರಾಂತಿಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ರಿಕ್ಲೇನರ್ ಚೇರ್ ಮತ್ತು ಮಸಾಜ್ ಚೇರ್ ವ್ಯವಸ್ಥೆ ಮಾಡಿಸಿದ್ದಾರೆ. ಅದರೊಂದಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಅದರ ಜತೆಗೆ ಇದೀಗ ಸದನದೊಳಗೆ ಶಾಸಕರ ಆಸನದ ಬಳಿಯೇ ಕಾಫಿ-ಟೀ ತಂದು ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ.