ಸಾರಾಂಶ
ಈಗ ಮೈಸೂರಿನ ಮುಡಾ ಅವ್ಯವಹಾರದಲ್ಲಿ ಕೇಂದ್ರ ಬಿಂದುವಾಗಿರುವ 3.16 ಎಕರೆ ಭೂಮಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ
ಬೆಂಗಳೂರು ; ಈಗ ಮೈಸೂರಿನ ಮುಡಾ ಅವ್ಯವಹಾರದಲ್ಲಿ ಕೇಂದ್ರ ಬಿಂದುವಾಗಿರುವ 3.16 ಎಕರೆ ಭೂಮಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಮೈಸೂರಿನ ಕೆಸರೇ ಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ ತಮ್ಮ ಪತ್ನಿಗೆ 14 ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.
ಅದರ ಬೆಲೆ 62 ಕೋಟಿ ರು. ಬರಬೇಕಿದ್ದು, 18 ಕೋಟಿ ರು. ನಿವೇಶನ ಪಡೆದುದಾಗಿ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು 2013ರ ಚುನಾವಣಾ ಅಫಿಡವಿಟ್‍ನಲ್ಲಿ 3.16 ಎಕರೆ ಭೂಮಿಯ ಬಗ್ಗೆ ಉಲ್ಲೇಖಿಸಿಲ್ಲ. ಇದು ಚುನಾವಣೆ ನಿಯಮಗಳ ಉಲ್ಲಂಘನೆ. ಇದೆಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಕುರಿತು ನಿರ್ಧರಿಸುತ್ತೇವೆ ಎಂದು ತಿಳಿಸಿದರು.