ಕಾಂಗ್ರೆಸ್‌ ಪಟ್ಟಿಯಲ್ಲಿ 9 ಹೆಸರಿಗೆ ವರಿಷ್ಠರ ಅಂಕಿತ?

| Published : Mar 08 2024, 01:50 AM IST / Updated: Mar 08 2024, 09:47 AM IST

ಸಾರಾಂಶ

ಸದ್ಯದಲ್ಲೇ ಎದುರಾಗಲಿರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್‌ನ ಮೊದಲ ಕೇಂದ್ರ ಚುನಾವಣಾ ಸಮಿತಿ ಸಭೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಗುರುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ನವದೆಹಲಿ

ಸದ್ಯದಲ್ಲೇ ಎದುರಾಗಲಿರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್‌ನ ಮೊದಲ ಕೇಂದ್ರ ಚುನಾವಣಾ ಸಮಿತಿ ಸಭೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಗುರುವಾರ ನಡೆಯಿತು. 

ರಾಜ್ಯದ 28 ಕ್ಷೇತ್ರಗಳ ಪೈಕಿ ರಾಜ್ಯ ಘಟಕವು ಒಂದೇ ಹೆಸರು ಶಿಫಾರಸು ಮಾಡಿದ್ದ 9 ಕ್ಷೇತ್ರಗಳ ಅಭ್ಯರ್ಥಿಯ ಹೆಸರಿಗೆ ಅನುಮೋದನೆ ನೀಡಲಾಯಿತು ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಕಚೇರಿಯಲ್ಲಿ ಸಂಜೆ 6.30ಕ್ಕೆ ಆರಂಭವಾಗಿ ರಾತ್ರಿ ಸುಮಾರು 10 ಗಂಟೆ ವರೆಗೂ ನಡೆದ ಈ ಮೊದಲ ಸಭೆಯಲ್ಲಿ ಕರ್ನಾಟಕ, ಕೇರಳ, ತೆಲಂಗಾಣ ರಾಜ್ಯಗಳ 60 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆಯಾಗಿದೆ. 

ಕರ್ನಾಟಕದ ರಾಜ್ಯ ಚುನಾವಣಾ ಸ್ಕ್ರೀನಿಂಗ್ ಸಮಿತಿಯು 14 ಕ್ಷೇತ್ರಗಳಿಗೆ ಒಬ್ಬೊಬ್ಬ ಅಭ್ಯರ್ಥಿ ಹೆಸರು ಅಖೈರುಗೊಳಿಸಿದೆ. ಆ ಪಟ್ಟಿಯಲ್ಲಿ 9 ಹೆಸರಿಗೆ ಒಪ್ಪಿಗೆ ದೊರೆತಿದೆ ಎಂದು ತಿಳಿದುಬಂದಿದೆ. 

2 ಹಂತದಲ್ಲಿ ಪಟ್ಟಿ ಬಿಡುಗಡೆ: ಸಭೆಗೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ರಾಜ್ಯದ 28 ಕ್ಷೇತ್ರಗಳ ಪಟ್ಟಿಯನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಲ್ಲ. 

ಎರಡು ಹಂತದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.ಬಿಜೆಪಿಯವರ ರಾಜಕಾರಣಕ್ಕೂ ನಮ್ಮ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಮೇಲೆ ರಾಜಕಾರಣ ನಡೆಯುವುದಿಲ್ಲ. 

ಪಕ್ಷ, ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ನಾವು ರಾಜಕೀಯ ಮಾಡುತ್ತೇವೆ. ಅವರು ಅವರದೇ ಆದ ಲೆಕ್ಕಾಚಾರ ಇಟ್ಟುಕೊಂಡಿದ್ದರೆ, ನಾವು ನಮ್ಮದೇ ಲೆಕ್ಕಾಚಾರ ಇಟ್ಟುಕೊಂಡು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.

ಸಿಎಂ ಗೈರು: ಸಭೆಯಲ್ಲಿ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಹಿರಿಯ ನಾಯಕರಾದ ಅಂಬಿಕಾ ಸೋನಿ, ಅಧೀರ್ ರಂಜನ್ ಚೌದರಿ, ಸಲ್ಮಾನ್ ಖುರ್ಷಿದ್, ಮಧುಸೂದನ್ ಮಿಸ್ತ್ರಿ, ವೇಣುಗೋಪಾಲ ಮತ್ತಿತರರ ಜತೆಗೆ, ಕರ್ನಾಟಕದಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ಪಾಲ್ಗೊಂಡಿದ್ದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ಉಪಸ್ಥಿತರಿರಬೇಕಿತ್ತಾದರೂ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕಾರಣ ಅವರು ಗೈರಾಗಿದ್ದರು.

ರಾಜ್ಯದ ಅರ್ಧದಷ್ಟು ಸೀಟುಗಳ ಬಗ್ಗೆ ಚರ್ಚೆಯಾಗಿದೆ: ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಒಂದೇ ಹಂತದಲ್ಲಿ ಮಾಡಲು ಸಾಧ್ಯವಿಲ್ಲ. ಎರಡು ಹಂತದಲ್ಲಿ ಚರ್ಚೆ ಆಗಿ ನಿರ್ಧಾರ ಹೊರಬೀಳಲಿದೆ. 

ಇಂದಿನ ಸಭೆಯಲ್ಲಿ ಅರ್ಧದಷ್ಟು ಸೀಟುಗಳ ಬಗ್ಗೆ ಚರ್ಚೆಯಾಗಿದೆ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಅಂತಿಮ ನಿರ್ಧಾರವನ್ನು ಎಐಸಿಸಿ ಮಾಡಲಿದೆ.- ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ