ಸಾರಾಂಶ
ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಶನಿವಾರ ಭರ್ಜರಿ ಪ್ರಚಾರ ಕಾರ್ಯ ನಡೆಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಲ್ಲೂರಹಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಮನ್ಸೂರ್ ಅಲಿ ಖಾನ್ ಪ್ರಚಾರ ಕಾರ್ಯ ಆರಂಭಿಸಿದರು. ಕ್ಷೇತ್ರದ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರು ಸೇರಿದಂತೆ ಎಲ್ಲರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗುತ್ತಿದೆ. ಈ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆಯಲು ಮತ್ತು ಎಲ್ಲರಿಗೂ ಒಳಿತಾಗಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದರು.
ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳಿಂದ ಎಲ್ಲರಿಗೆ ಅನುಕೂಲವಾಗಿದೆ. ಅದೇ ರೀತಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದಂತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಬೇಕು ಎಂದು ಮತದಾರರಲ್ಲಿ ಕೋರಿದರು.
ಪ್ರಚಾರದ ವೇಳೆ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುಂದನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ ಮತಯಾಚನೆ ಮಾಡಿದ ಮನ್ಸೂರ್ ಅಲಿ ಖಾನ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲಿಸಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶ ಕಲ್ಪಿಸುವಂತೆ ಮತದಾರರಲ್ಲಿ ಕೇಳಿಕೊಂಡರು.
ಮಹಿಳೆಯರಿಗೆ ಬಸ್, ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ನಗದು, ಅನ್ನಭಾಗ್ಯ ಯೋಜನೆ ಮತ್ತು ಅರ್ಹ ನಿರುದ್ಯೋಗಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಸರ್ವರ ಕಲ್ಯಾಣಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಮನ್ಸೂರ್ ಅಲಿ ಖಾನ್ ಮತದಾರರಿಗೆ ತಿಳಿಸಿದರು.
ಈ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ನಾಗೇಶ್ ಬೆಳತೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಶೇಖರ್ ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಜೊತೆಯಾಗಿದ್ದರು.
ಸಲೀಂ ಅಹ್ಮದ್ ಪ್ರಚಾರ
ಮನ್ಸೂರ್ ಅಲಿ ಖಾನ್ ಪರವಾಗಿ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಧನೆಗಳನ್ನು ಮತದಾರರಿಗೆ ವಿವರಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಬಡ ಕುಟುಂಬದ ಒಬ್ಬ ಮಹಿಳೆಯ ಬ್ಯಾಂಕ್ ಖಾತೆಗೆ ಒಂದು ಲಕ್ಷ ರುಪಾಯಿ ವರ್ಗಾವಣೆ ಮಾಡಲಾಗುತ್ತದೆ. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗುತ್ತದೆ. ಇದರಿಂದ ಬಡವರಿಗೆ ಅನುಕೂಲ ಆಗುವ ಜೊತೆಗೆ ಮಹಿಳೆಯರ ಸಬಲೀಕರಣವಾಗುತ್ತದೆ ಎಂದು ಮತದಾರರಲ್ಲಿ ಮನವರಿಕೆ ಮಾಡಿದರು.