ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಮಂಡ್ಯ ಜಿಲ್ಲೆಯ ಶಾಸಕರ ಗೌರವ ಉಳಿಸಿ: ಕೃಷಿ ಸಚಿವ ಸಿಆರ್‌ಎಸ್‌

| Published : Mar 27 2024, 01:00 AM IST

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಮಂಡ್ಯ ಜಿಲ್ಲೆಯ ಶಾಸಕರ ಗೌರವ ಉಳಿಸಿ: ಕೃಷಿ ಸಚಿವ ಸಿಆರ್‌ಎಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಚಿವ ನಿರ್ಮಲ ಸೀತಾರಾಮ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರು ರಾಜ್ಯದ ಜನರಿಗೆ ಅನ್ಯಾಯ ಮಾಡಬಾರದು. ವಿತ್ತ ಖಾತೆ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರಿಗೆ ದೇಶದ ಆರ್ಥಿಕ ಪರಿಸ್ಥಿತಿಯ ಅರಿವಿಲ್ಲ. ಕರ್ನಾಟಕಕ್ಕೆ ಬರಬೇಕಾದ ಪಾಲಿನ ಹಣವನ್ನು ಕೇಳಿದರೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರುಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ಜಿಲ್ಲೆಯ ಶಾಸಕರ ಗೌರವ ಉಳಿಸಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ತಾಲೂಕಿನ ಸೋಮನಹಳ್ಳಿ ಸಮೀಪದ ತಿಮ್ಮ ದಾಸ್ ಹೋಟೆಲ್ ಮೈದಾನದಲ್ಲಿ ಮಂಗಳವಾರ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಸಿ. ತಮ್ಮಣ್ಣರನ್ನು ಸೋಲಿಸಿದ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪರಿವರ್ತನೆ ಆಗಬೇಕು ಎಂದರು.

ಮಂಡ್ಯ ಜಿಲ್ಲೆಯ ಜನರು 5 ವರ್ಷಗಳ ಕಾಲ ಜೆಡಿಎಸ್ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ನೋಡಿದ್ದೀರಿ. ಈಗ ನಮ್ಮ ಪಕ್ಷದ ಶಾಸಕರ ಜನಪರ ಕಾಳಜಿ ಮತ್ತು ಅಭಿವೃದ್ಧಿ ಎರಡನ್ನು ತುಲನೆ ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಶಾಸಕರಾದ ಮಧು ಜಿ.ಮಾದೇಗೌಡ, ಉದಯ್, ದಿನೇಶ್ ಗೂಳಿಗೌಡ ಹಾಗೂ ಮಾಜಿ ಶಾಸಕ ಬಿ.ರಾಮಕೃಷ್ಣ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಬೇಕು ಎಂದರು.

ವಿತ್ತ ಸಚಿವರ ಬಾಯಿಗೆ ಸಕ್ಕರೆ ಅಥವಾ ಇನ್ನೇನು ಹಾಕಬೇಕು:

ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ವಿಶೇಷ ಅನುದಾನದಲ್ಲಿ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎನ್ನುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಬಾಯಿಗೆ ಸಕ್ಕರೆ ಅಥವಾ ಇನ್ನೇನು ಹಾಕಬೇಕು ಎಂದು ಕಿಡಿಕಾರಿದರು.

ನಿರ್ಮಲ ಸೀತಾರಾಮ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರು ರಾಜ್ಯದ ಜನರಿಗೆ ಅನ್ಯಾಯ ಮಾಡಬಾರದು. ವಿತ್ತ ಖಾತೆ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರಿಗೆ ದೇಶದ ಆರ್ಥಿಕ ಪರಿಸ್ಥಿತಿಯ ಅರಿವಿಲ್ಲ. ಕರ್ನಾಟಕಕ್ಕೆ ಬರಬೇಕಾದ ಪಾಲಿನ ಹಣವನ್ನು ಕೇಳಿದರೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಮಾರಂಭದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ. ಉದಯ್, ಪಿ. ರವಿಕುಮಾರ್, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮರಿತಿಬ್ಬೇಗೌಡ, ಮಾಜಿ ಶಾಸಕ ಬಿ. ರಾಮಕೃಷ್ಣ, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ .ಗಂಗಾಧರ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಚಿದಂಬರ್, ಕಿಸಾನ್ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷ ಅಂಜನ ಶ್ರೀಕಾಂತ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಸಿ.ಎ.ಕೆರೆ ಹೋಬಳಿ ಘಟಕದ ಅಧ್ಯಕ್ಷ ಶಿವಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷರಾದ ಬಸವರಾಜು, ಸುರೇಶ್ ಕಂಠಿ, ಮಾಜಿ ಸದಸ್ಯ ಅಣ್ಣೂರು ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಮತ್ತಿತರರು ಇದ್ದರು.

ದೇವೇಗೌಡರಿಂದ ಸಿದ್ದರಾಜು ಕುಟುಂಬ ಬೀದಿಪಾಲು: ಮರಿತಿಬ್ಬೇಗೌಡ

ಮದ್ದೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಬೀಗರಾದ ಡಿ.ಸಿ.ತಮ್ಮಣ್ಣರನ್ನು ಮದ್ದೂರು ಕ್ಷೇತ್ರಕ್ಕೆ ಕರೆತರುವ ಉದ್ದೇಶದಿಂದ ತಮ್ಮ ರಾಜಕೀಯ ಏಳಿಗೆಗೆ ದುಡಿದ ಮಾಜಿ ಶಾಸಕ ದಿ. ಎಂ.ಎಸ್. ಸಿದ್ದರಾಜು ಮತ್ತು ಅವರ ಕುಟುಂಬವನ್ನು ಇಂದು ಬೀದಿ ಪಾಲು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ ಮಂಗಳವಾರ ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬದ ಅಧಿಕಾರದ ದಾಹಕ್ಕಾಗಿ ಸಿದ್ದರಾಜು ಮತ್ತು ಅವರ ಕುಟುಂಬವನ್ನು ಬೀದಿಪಾಲು ಮಾಡಿ ರಾಜಕಾರಣದಲ್ಲಿ ಅವರು ತಲೆ ಎತ್ತದಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.