ಕರ್ನಾಟಕದಲ್ಲಿ ಶೇ.63ರಷ್ಟು ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತರು ಹೇಳಿದ್ದಾರೆ. ಹೀಗಾಗಿ, ಈ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಉಪಲೋಕಾಯುಕ್ತರೇ ಈ ಬಗ್ಗೆಹೇಳಿದ್ದಾರೆ: ಪ್ರತಿಪಕ್ಷ ನಾಯಕ
---ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕದಲ್ಲಿ ಶೇ.63ರಷ್ಟು ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತರು ಹೇಳಿದ್ದಾರೆ. ಹೀಗಾಗಿ, ಈ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.ಗುರುವಾರ ಪಕ್ಷದ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸಮಾರಂಭವೊಂದರಲ್ಲಿ ಈ ಕುರಿತು ಆಡಿದ ಮಾತುಗಳ ವಿಡಿಯೋ ಪ್ರದರ್ಶಿಸಿ ಮಾತನಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಶೇ.63 ಕಮಿಷನ್, ಮೊದಲಾದ ಆರೋಪಗಳು ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿ ಕೊಡಿ ಎಂದು ಕೇಳಿದ್ದರು. ಇಂತಹ ಸಮಯದಲ್ಲೇ ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ನ್ಯಾಯಮೂರ್ತಿಗಳೇ ಸಾಕ್ಷಿ. ನಮ್ಮ ವಿರುದ್ಧ ಶೇ.40 ಕಮಿಷನ್ ಎಂದು ಎಸ್ಐಟಿ ಮಾಡಿದ್ದೀರಲ್ಲವೇ? ಈಗ ಯಾವ ಎಸ್ಐಟಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಕರ್ನಾಟಕ ಕಾಂಗ್ರೆಸ್‌ನ ಎಟಿಎಂ:
ಯಾವುದೇ ರಾಜ್ಯದ ಚುನಾವಣೆ ನಡೆದರೂ ಕರ್ನಾಟಕ ಎಟಿಎಂ ಆಗಿರುತ್ತದೆ. ಬಿಹಾರ ಚುನಾವಣೆಗೆ ಸುಮಾರು 300 ಕೋಟಿ ರು. ವರ್ಗಾವಣೆಯಾಗಿದೆ. ‘ಪೇಸಿಎಂ’ ಎಂಬ ಭಿತ್ತಿಪತ್ರವನ್ನು ಕಾಂಗ್ರೆಸ್ ನಾಯಕರ ಮುಖದ ಮೇಲೆ ಅಂಟಿಸಬೇಕು. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.ನ್ಯಾಯಮೂರ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಭೋವಿ ನಿಗಮದಲ್ಲಿ ಒಂದು ಎಕರೆ ಉಳುಮೆ ನೀಡಲು 25 ಲಕ್ಷ ರು. ಕಮಿಷನ್ ಇದೆ. ಬಾರ್ ಲೈಸೆನ್ಸ್‌ಗೆ 20 ಲಕ್ಷ ರು. ಕಮಿಷನ್ ಇದೆ. ಟ್ರಾನ್ಸ್‌ಫಾರ್ಮರ್ ಅಳವಡಿಕೆಯಲ್ಲಿ 90 ಕೋಟಿ ರು. ಹಗರಣ ನಡೆದಿದೆ. ಕಸದ ಯಂತ್ರ ಖರೀದಿಯಲ್ಲಿ ಎರಡೂವರೆ ಕೋಟಿ ರು. ಹಗರಣ ನಡೆಯುತ್ತಿದೆ ಎಂದು ದೂರಿದರು.
ವಿರೋಧ ಪಕ್ಷಗಳಿಗೆ ಹೆದರಿ ಕಾಂಗ್ರೆಸ್ ಸಭೆ ನಡೆಸಿ ಶಾಸಕರನ್ನು ತಯಾರಿ ಮಾಡಿದೆ. ರೈತರಿಗೆ ಮಾಡಿದ ಅನ್ಯಾಯ, ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯದ ಬಗ್ಗೆ ಸದನದಲ್ಲಿ ಮಾತನಾಡುತ್ತೇವೆ. ಪ್ರವಾಹ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮೊದಲ ದಿನವೇ ಚರ್ಚೆಯಾಗಲೇಬೇಕು. ಮುಖ್ಯಮಂತ್ರಿಗಳೇ ಕಳ್ಳತನ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸರು ಕೂಡ ದರೋಡೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪೊಲೀಸರು ಹಣ ಸಂಗ್ರಹ ಮಾಡಬೇಕಿರುವುದರಿಂದ ಅಪರಾಧ ಚಟುವಟಿಕೆಗಳಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಚೋರಿ ಚೋರಿ ಎಂದು ಕೂಗುತ್ತಾರೆ. ಅವರು ಕರ್ನಾಟಕಕ್ಕೆ ಬಂದರೆ ಇಲ್ಲಿಯೇ ಚೋರಿ ಮಾಡುವುದು ಕಾಣುತ್ತದೆ ಎಂದರು.