ಸಾರಾಂಶ
ಗುತ್ತಿಗೆದಾರರ ಸಂಘದ ಅಧ್ಯಕ್ಷರು ದುರುದ್ದೇಶಪೂರ್ವಕವಾಗಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಯಾರೋ ಇದನ್ನು ಅವರ ಬಳಿ ಹೇಳಿಸುತ್ತಿದ್ದಾರೆ. ಅವರ ಆರೋಪ ಸತ್ಯವಾಗಿದ್ದರೆ, ಅವರಿಗೆ ಕೋರ್ಟ್‌ಗೆ ಹೋಗುವುದಕ್ಕೆ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರು : ಗುತ್ತಿಗೆದಾರರ ಸಂಘದ ಅಧ್ಯಕ್ಷರು ದುರುದ್ದೇಶಪೂರ್ವಕವಾಗಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಯಾರೋ ಇದನ್ನು ಅವರ ಬಳಿ ಹೇಳಿಸುತ್ತಿದ್ದಾರೆ. ಅವರ ಆರೋಪ ಸತ್ಯವಾಗಿದ್ದರೆ, ಅವರಿಗೆ ಕೋರ್ಟ್‌ಗೆ ಹೋಗುವುದಕ್ಕೆ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮೀಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಆರೋಪ ಮಾಡುತ್ತಿರುವವರು ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪಿಸಲಾಗುತ್ತಿದೆ ಎಂದರು.
ಬಿಲ್ ಪಾವತಿ: ಗುತ್ತಿಗೆದಾರ
ಜತೆ ಡಿಕೆಶಿ ಇಂದು ಸಭೆ?
ಬೆಂಗಳೂರು: ಬಾಕಿ ಬಿಲ್ ಪಾವತಿಗೆ ಸಂಬಂಧಿಸಿ ಸರ್ಕಾರಕ್ಕೆ ಡಿಸೆಂಬರ್‌ವರೆಗೆ ಗಡುವು ನೀಡಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಗಳಿವೆ. ಪದೇಪದೆ ಮನವಿ ಮಾಡಿದರೂ ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ರಾಜ್ಯ ಗುತ್ತಿಗೆದಾರರು ಡಿಸೆಂಬರ್ ತಿಂಗಳೊಳಗೆ ಬಾಕಿ ಬಿಲ್ ಪಾವತಿಸುವಂತೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದರು. ಒಂದು ವೇಳೆ ಡಿಸೆಂಬರ್ ತಿಂಗಳೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ, ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ಅದರಂತೆ ಶನಿವಾರ ಗುತ್ತಿಗೆದಾರರೊಂದಿಗೆ ಸಭೆ ನಡೆಸುವ ನಡೆಸುವ ಸಾಧ್ಯತೆಗಳಿವೆ.