ಸಾರಾಂಶ
ಸ್ವಪಕ್ಷೀಯ ಶಾಸಕರೇ ದೂರುಗಳ ಸುರಿಮಳೆ ಸುರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಸಚಿವರೊಂದಿಗೆ ದಿಢೀರ್ ‘ಒನ್ ಟು ಒನ್’ ಸಭೆ ಶುರು ಮಾಡಿದ್ದು, ಶಾಸಕರ ದೂರುಗಳ ಕುರಿತು ಸಚಿವರಿಂದ ವಿವರಣೆ ಪಡೆದಿದ್ದಾರೆ.
ಬೆಂಗಳೂರು : ರಾಜ್ಯ ಸಚಿವರ ಕಾರ್ಯವೈಖರಿ ಕುರಿತು ಸ್ವಪಕ್ಷೀಯ ಶಾಸಕರೇ ದೂರುಗಳ ಸುರಿಮಳೆ ಸುರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಸಚಿವರೊಂದಿಗೆ ದಿಢೀರ್ ‘ಒನ್ ಟು ಒನ್’ ಸಭೆ ಶುರು ಮಾಡಿದ್ದು, ಶಾಸಕರ ದೂರುಗಳ ಕುರಿತು ಸಚಿವರಿಂದ ವಿವರಣೆ ಪಡೆದಿದ್ದಾರೆ.
ಮೂರು ದಿನಗಳ ಸಭೆಯಲ್ಲಿ ಮೊದಲ ದಿನವಾದ ಸೋಮವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಸತಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ಅವರೊಂದಿಗೆ ಸುರ್ಜೇವಾಲಾ ಮುಖಾಮುಖಿ ಸಭೆ ನಡೆಸಿದರು.
ಈ ವೇಳೆ ಶಾಸಕರ ಪತ್ರ, ಶಿಫಾರಸುಗಳಿಗೆ ಸ್ಪಂದಿಸಿ. ಕ್ಷೇತ್ರಗಳಲ್ಲಿನ ಅಧಿಕಾರಿಗಳ ವರ್ಗಾವಣೆ, ಅನುದಾನದ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆಯಬೇಕು. ಅಧಿಕಾರಿಗಳು ಶಾಸಕರನ್ನು ಗೌರವಿಸುವಂತೆ ನೋಡಿಕೊಳ್ಳಬೇಕು. ಇದಾಗಬೇಕೆಂದರೆ ಮೊದಲು ನೀವು ಪಕ್ಷದ ಶಾಸಕರನ್ನು ಗೌರವಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.
ಶಾಸಕರನ್ನು ವಿಶ್ವಾಸಕ್ಕೆ ಪಡೆಯಿರಿ:
ವಸತಿ ಹಂಚಿಕೆ ವೇಳೆ ಭ್ರಷ್ಟಾಚಾರ ನಡೆಯುತ್ತಿದೆ. ಮನೆಗಳ ಹಂಚಿಕೆ ವೇಳೆ ಶಾಸಕರ ಮಾತಿಗೆ ಬೆಲೆ ನೀಡುತ್ತಿಲ್ಲ ಎಂಬ ಶಾಸಕ ಬಿ.ಆರ್.ಪಾಟೀಲ್ ಆರೋಪ ಹಾಗೂ ವಿಜಯನಗರ, ಬಳ್ಳಾರಿ ಭಾಗದ ಶಾಸಕರ ದೂರುಗಳ ಬಗ್ಗೆ ಸುರ್ಜೇವಾಲಾ ಅವರು ಜಮೀರ್ ಅವರೊಂದಿಗೆ ವಿವರಣೆ ಪಡೆದರು. ಇಲಾಖೆಯ ಸಾಧನೆಯೇನು? ಎಷ್ಟೆಲ್ಲಾ ಮನೆ ಹಂಚಿಕೆ ಮಾಡಲಾಗಿದೆ. ಹಂಚಿಕೆಗೆ ಯಾವ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎಂದು ಮಾಹಿತಿ ಪಡೆದರು.
ಇದೇ ವೇಳೆ ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಯಾವುದೇ ಕಾರ್ಯಕ್ರಮ, ಫಲಾನುಭವಿಗಳಿಗೆ ಯೋಜನೆಯ ಲಾಭ ಹಂಚಿಕೆ ವೇಳೆ ಶಾಸಕರನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜತೆಗೆ ಸಚಿವ ರಹೀಂ ಖಾನ್ ವಿರುದ್ಧವೂ ಸಾಕಷ್ಟು ಶಾಸಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಮ್ಮ ಇಲಾಖೆ ಬಗ್ಗೆ ಶಾಸಕರಿಗೆ ಅಸಮಾಧಾನ ಇದೆ. ನಿಮ್ಮ ಕಚೇರಿ ಸಿಬ್ಬಂದಿ ಶಾಸಕರಿಗೆ ಸ್ಪಂದಿಸುವುದಿಲ್ಲ ಎಂಬ ದೂರಿದೆ. ಇದನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಸಚಿವ ಬೈರತಿ ಸುರೇಶ್ ಅವರ ಬಗ್ಗೆ ಇಲಾಖೆಯ ಕಾರ್ಯವೈಖರಿ ಕುರಿತು ಯಾವುದೇ ಗಂಭೀರ ದೂರುಗಳಿಲ್ಲದಿದ್ದರೂ ಕೋಲಾರ ಉಸ್ತುವಾರಿ ಸಚಿವರಾಗಿದ್ದರೂ ಕೋಲಾರ ಭಾಗದ ಶಾಸಕರ ಕಾರ್ಯವೈಖರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೆಲ ಶಾಸಕರು ಆರೋಪಿಸಿದ್ದಾರೆ. ಇಂತಹ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಎಂದಿರುವುದಾಗಿ ಮೂಲಗಳು ತಿಳಿಸಿವೆ.
ವೈಯಕ್ತಿಕವಾಗಿ ಸಚಿವರ ಸಾಧನೆಗಳೇನು? ಮುಂದಿನ ಗುರಿಗಳೇನು? ಈವರೆಗೆ ಗುರಿ ಹಾಗೂ ಉದ್ದೇಶಿತ ಯೋಜನೆಗಳು ಎಷ್ಟು ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿವೆ. ಉಳಿದವು ಬಾಕಿ ಉಳಿಯಲು ಕಾರಣಗಳೇನು? ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಇಲಾಖೆಗಳಲ್ಲಿ ಯಾರಾದರೂ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರಾ ಎಂಬುದು ಸೇರಿ ಸಿದ್ಧ ಪ್ರಶ್ನಾವಳಿಯಲ್ಲಿನ ಹಲವು ಪ್ರಶ್ನೆಗಳನ್ನು ಕೇಳಿ ಸುರ್ಜೇವಾಲಾ ಉತ್ತರ ಪಡೆದರು ಎಂದು ತಿಳಿದುಬಂದಿದೆ.
ಶಾಸಕರ ದೂರುಗಳ ಹಿನ್ನೆಲೆ ಸಭೆ:
ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ ಸೇರಿ ಹಲವು ಕಾಂಗ್ರೆಸ್ ಶಾಸಕರು ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಹಾಗೂ ಶಾಸಕರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಜೂ.30 ರಿಂದ ಜು.2 ರವರೆಗೆ ಹಾಗೂ ಜು.7 ರಿಂದ ಜು.9 ರವರೆಗೆ ಎರಡು ಹಂತದಲ್ಲಿ 100ಕ್ಕೂ ಹೆಚ್ಚು ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದಾಗ ಸಚಿವರ ಬಗ್ಗೆ ತೀವ್ರ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಸಚಿವರೊಂದಿಗೆ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಿಲ್ಲ. ಕನಿಷ್ಠ ಸಚಿವರನ್ನು ಭೇಟಿ ಮಾಡುವುದೇ ಕಷ್ಟ ಎಂಬಂತಾಗಿದೆ. ಹೀಗಾದರೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ನೀಡುತ್ತಾರಾ? ನಮ್ಮ ಗೌರವ ಕಳೆಯುವ ಕೆಲಸ ಸಚಿವರೇ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ. ಶಾಸಕರು ನೀಡಿರುವ ಮಾಹಿತಿ ಹಾಗೂ ಉತ್ತರಗಳನ್ನು ಸಂಪೂರ್ಣವಾಗಿ ಲಿಖಿತವಾಗಿ ಸುರ್ಜೇವಾಲಾ ದಾಖಲಿಸಿಕೊಂಡರು ಎಂದು ತಿಳಿದುಬಂದಿದೆ.
ನನ್ನ ಬಗ್ಗೆ ದೂರು ಇಲ್ಲ
ನನ್ನ ಇಲಾಖೆಯ ಸಾಧನೆಗಳ ಬಗ್ಗೆ ಯಾವುದೇ ದೂರು ಇಲ್ಲ. ಸುರ್ಜೇವಾಲಾ ಅವರು ನಮ್ಮ ಇಲಾಖೆ ಸಾಧನೆ ಬಗ್ಗೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತಿನ ಸಭೆಯಲ್ಲಿ ಬಿ.ಆರ್. ಪಾಟೀಲ್ ಆರೋಪ ಪ್ರಸ್ತಾಪವಾಗಿಲ್ಲ. ಆ ಬಗ್ಗೆ ಹಿಂದೆಯೇ ವಿವರಣೆ ನೀಡಿದ್ದೆ.
-ಜಮೀರ್ ಅಹಮದ್ ಖಾನ್, ವಸತಿ ಸಚಿವ
ನನ್ನ ಬಗ್ಗೆ ಸಮಾಧಾನ ಇದೆ
ಇಲಾಖೆ ಸಾಧನೆ ಬಗ್ಗೆ ಸುರ್ಜೇವಾಲಾ ಅವರಿಗೆ ಸಮಾಧಾನ ಇದೆ. ನನ್ನ ಮೇಲೆ ಯಾವ ಶಾಸಕರೂ ದೂರು ನೀಡಿಲ್ಲ. ಶಾಸಕರು ನೀಡಿದ್ದರೂ ಅದರ ಬಗ್ಗೆ ನನ್ನ ಜತೆ ಚರ್ಚೆ ಮಾಡಿಲ್ಲ. ಬಂಗಾರಪೇಟೆ ನಾರಾಯಣಸ್ವಾಮಿ ನಮ್ಮ ಹಿರಿಯಣ್ಣ ಇದ್ದ ಹಾಗೆ. ಅವರ ಮಾಧ್ಯಮಗಳ ಬಳಿ ಸಮಸ್ಯೆ ಹೇಳಿರಬಹುದು. ನನ್ನ ಹತ್ತಿರ ಯಾವುದೇ ದೂರು ಹೇಳಿಲ್ಲ.
-ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಶಾಸಕರಿಗೆ ಸ್ಪಂದಿಸುತ್ತಿದ್ದೇನೆ
ನನ್ನ ಇಲಾಖೆ ಕೆಲಸದ ಬಗ್ಗೆ ಸುರ್ಜೇವಾಲಾ ಅವರಿಗೆ ಮಾಹಿತಿ ಇತ್ತು. ಕೆಲ ಕಾರಣಗಳಿಂದ ಕೆಲ ಕೆಲಸಗಳು ಆಗದೇ ಇರುವುದು ಇತ್ತು. ಆದರೆ ನಾನು ಎಲ್ಲಾ ಶಾಸಕರಿಗೂ ಗೌರವ ನೀಡುತ್ತೇನೆ. ಎಲ್ಲಾ ಶಾಸಕರಿಗೂ ಸ್ಪಂದಿಸುತ್ತಿದ್ದೇನೆ.
- ರಹೀಂ ಖಾನ್, ಪೌರಾಡಳಿತ ಸಚಿವ