ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ: ಶಾಸಕ ಎಚ್.ಟಿ.ಮಂಜು

| Published : Jul 02 2025, 12:23 AM IST

ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಮನಸ್ಸು ಹೊಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ. ಮಂಡ್ಯ ಜಿಲ್ಲೆಯ 8 ಕ್ಷೇತ್ರಗಳಲ್ಲಿಯೂ ಕೈಗಾರಿಕೆ ಉದ್ದಿಮೆ ತೆರೆಯಲು ಕುಮಾರಣ್ಣ ಸಿದ್ಧರಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮುಂಬರುವ ಸ್ಥಳೀಯ ಚುನಾವಣೆಗಳ ಮೇಲೆ ಗಮನವಿಟ್ಟು ಜೆಡಿಎಸ್ ಪಕ್ಷ ಸಂಘಟನೆಗಾಗಿ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜನರೊಂದಿಗೆ ಜೆಡಿಎಸ್ ಅಂಗವಾಗಿ ತಾಲೂಕು ಜೆಡಿಎಸ್‌ನಿಂದ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.

ನಿಖಿಲ್ ತಾತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೋರಾಟಗಳನ್ನು ಅನುಸರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಿದ್ದಾರೆ. ಈ ಬಗ್ಗೆ ಹಿರಿಯ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ನನ್ನ ಜೊತೆ ಹೇಳಿದ್ದಾರೆ. ಇದು ನಿಜವಾಗಿಯೂ ಸತ್ಯ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಮನಸ್ಸು ಹೊಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ. ಮಂಡ್ಯ ಜಿಲ್ಲೆಯ 8 ಕ್ಷೇತ್ರಗಳಲ್ಲಿಯೂ ಕೈಗಾರಿಕೆ ಉದ್ದಿಮೆ ತೆರೆಯಲು ಕುಮಾರಣ್ಣ ಸಿದ್ಧರಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ 600-700 ಎಕರೆ ಜಾಗ ಕೇಳಿ ನೀಲನಕ್ಷೆ ತಯಾರಿಸಿಕೊಂಡಿದ್ದಾರೆ. ನಮ್ಮ ತಾಲೂಕಿನ ಕೋಟಹಳ್ಳಿ, ಶೀಳನೆರೆ ಮುಂತಾದ ಕಡೆ ಕೈಗಾರಿಕೆ ಆರಂಭಿಸಲು ಅಗತ್ಯವಾದ ಸರ್ಕಾರಿ ಭೂಮಿಯಿದೆ. ಆದರೆ, ರಾಜ್ಯ ಸರ್ಕಾರ ಭೂಮಿ ನೀಡಲು ಸಹಕರಿಸುತ್ತಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ನಾನು ಕ್ಷೇತ್ರದ ಶಾಸಕನಾಗಿದ್ದೇನೆ. ಕೆರೆ,ಕಟ್ಟೆಗಳ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕುಮಾರಣ್ಣ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಇದಕ್ಕೆ ನಾವೆಲ್ಲರೂ ಪೂರಕವಾಗಿ ಕೆಲಸ ಮಾಡೋಣ ಎಂದರು.

ಮಾಜಿ ಶಾಸಕ ನಾಗಮಂಗಲದ ಸುರೇಶ್ ಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕುಮಾರಸ್ವಾಮಿ ಅವರನ್ನು ಬೈಯ್ಯುವುದೇ ನಿತ್ಯದ ಕಾಯಕ. ಅವರಿಗೆ ಒಳ್ಳೆಯ ಹೃದಯ ಮತ್ತು ಒಳ್ಳೆಯ ಕಣ್ಣಿಲ್ಲ. ಅವರ ಕಣ್ಣು ಕೆ.ಆರ್.ಪೇಟೆ ಜನರ ಮೇಲೆ ಬೀಳದಂತೆ ನೋಡಿಕೊಳ್ಳಿ ಎಂದು ಎಚ್ಚರಿದರು.

ನಿಖಿಲ್ ಗೆ ಅದ್ಧೂರಿ ಸ್ವಾಗತ; ಬೈಕ್ ಬೃಹತ್ ಮೆರವಣಿಗೆ

ಕೆ.ಆರ್.ಪೇಟೆ:

ಜನರೊಂದಿಗೆ ಜನತಾದಳ ಅಂಗವಾಗಿ ಹಮ್ಮಿಕೊಂಡಿರುವ ಜೆಡಿಎಸ್ ಬೃಹತ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಟ್ಟಣದಲ್ಲಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.

ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ಹೊರವಲಯದ ಹೊನ್ನೇನಹಳ್ಳಿ ಗೇಟ್ ನಿಂದ ಸುಮಾರು 3 ಕಿ.ಮೀ ದೂರದ ವರೆಗೆ ನೂರಾರು ಆಟೋಗಳು, ಬೈಕ್ ಗಳೊಂದಿಗೆ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು.

ಮಾರ್ಗದುದ್ದಕ್ಕೂ ಎಚ್ಡಿಡಿ, ಎಚ್ಡಿಕೆ, ನಿಖಿಲ್ ಕುಮಾರಸ್ವಾಮಿ ಪರ ಜಯಘೋಷ ಹಾಕುತ್ತಾ ಅಲ್ಲಲ್ಲಿ ನಿಖಿಲ್‌ಗೆ ಅಭಿಮಾನಿಗಳು ಮಾಲಾರ್ಪಣೆ ಮಾಡಿದರು. ಪಟ್ಟಣದ ಪ್ರಮುಖ ವೃತ್ತದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಕ್ರೇನ್ ಸಹಾಯದೊಂದಿಗೆ ಕೊಬ್ಬರಿ ಹಾರ ಹಾಕಿ ಅಭಿನಂದಿಸಿದರು. ನಂತರ ಮುಖ್ಯ ವೇದಿಕೆಯಲ್ಲಿ ತಾಲೂಕು ಕುರುಬ ಸಮುದಾಯದ ಯುವಕರು ನಿಖಿಲ್ ಅವರಿಗೆ ಕಂಬಳಿ ಹೊದಿಸಿ ಟಗರು ನೀಡಿ ಅಭಿನಂದಿಸಿದರು.