ಸಾರಾಂಶ
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಸಿಕ್ಯೂಷನ್ ಅರ್ಜಿಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲರು ಪಕ್ಷಪಾತ ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರು : ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಶನಿವಾರ ವಿಧಾನಸೌಧದಿಂದ ರಾಜಭವನ ಚಲೋ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅರ್ಜಿಗಳಿಗೆ ಅನುಮತಿ ನೀಡುವಂತೆ ಆಗ್ರಹ ಮಾಡಿದ್ದಾರೆ.
ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ ನಾಯಕರು, ‘ಗೆಹಲೋತ್ ಹಟಾವೋ ಪ್ರಜಾಪ್ರಭುತ್ವ ಬಚಾವೋ’, ‘ರಾಜ್ಯಪಾಲರಲ್ಲ ಬಿಜೆಪಿಯ ಆಜ್ಞಾ ಪಾಲಕರು’, ‘ಪಕ್ಷಪಾತಿ ರಾಜ್ಯಪಾಲ, ಇವರು ಬಿಜೆಪಿ ಚೇಲಾ’ ಎಂಬ ಬರಹಗಳ ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ಸೇರಿದಂತೆ ಎಲ್ಲಾ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ರಾಜಭವನದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ರಾಜ್ಯಪಾಲರಿಗೆ ಸಾಮೂಹಿಕವಾಗಿ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಆರೋಪಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೀರಿ. ಆದರೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರೂ ಅನುಮತಿ ನೀಡಿಲ್ಲ. ಉಳಿದಂತೆ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನರೆಡ್ಡಿ ಪ್ರಾಸಿಕ್ಯೂಷನ್‌ಗೂ ಅನುಮತಿ ನೀಡಿಲ್ಲ. ಈ ಕೂಡಲೇ ಅನುಮತಿ ನೀಡಿ ಎಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.
ರಾಜಕೀಯ ಕಚೇರಿ ಆಗಬಾರದು:
ವಿಧಾನಸೌಧದ ಬಳಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜಭವನ ಚಲೋ ಹೋರಾಟ ಮುಖ್ಯಮಂತ್ರಿಗಳ ಪರವಾಗಿ ಅಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ನಾವು ನ್ಯಾಯಾಲಯದಲ್ಲೇ ಹೋರಾಡುತ್ತೇವೆ. ಆದರೆ, ರಾಜ್ಯಪಾಲರ ಕಚೇರಿ ರಾಜಕೀಯ ಕಚೇರಿ ಆಗಬಾರದು. ಸರ್ಕಾರವನ್ನು ಅಸ್ಥಿರಗೊಳಿಸಲು ಕಚೇರಿ ದುರ್ಬಳಕೆ ಆಗಬಾರದು. ಅವರು ಸಾಂವಿಧಾನಿಕವಾಗಿಯೇ ನಡೆಯಬೇಕು ಎಂದು ಆಗ್ರಹಿಸಲು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ವಿಚಾರದಲ್ಲಿ ಒಂದೇ ದಿನಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಲ ಮಾಜಿ ಪ್ರಾಸಿಕ್ಯೂಷನ್ ಅರ್ಜಿಗಳ ಬಗ್ಗೆ ಕ್ರಮ ಕೈಗೊಂಡಿಲ್ಲ. ಒಂದು ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಿದ್ದಾರೆ. ಈ ಪಕ್ಷಪಾತಿ ಧೋರಣೆ ಮಾಡಬಾರದು. ಪ್ರತಿಪಕ್ಷಗಳ ನಾಯಕರ ಪ್ರಾಸಿಕ್ಯೂಷನ್‌ಗೂ ಅನುಮತಿ ನೀಡಬೇಕು ಎಂದು ಆಗ್ರಹಿಸಲು ರಾಜಭವನಕ್ಕೆ ತೆರಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನ್ಯಾಯ ನೀಡುವ ಭರವಸೆ ನೀಡಿದ್ದಾರೆ:
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಶೀಘ್ರ ಇತ್ಯರ್ಥ ಮಾಡುವಂತೆ ಮನವಿ ಮಾಡಿದ್ದೇವೆ. ರಾಜ್ಯಪಾಲರು ನಮಗೆ ಟೀ, ಕಾಫಿ ಮತ್ತು ಉಪಾಹಾರವನ್ನು ಕೊಟ್ಟು ಉಪಚರಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿರುವುದಾಗಿ ಹೇಳಿದರು.
ನಾಲ್ಕು ಜನರ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾಯ್ದೆ, 197 ಸಿಪಿಸಿ ಕಾಯ್ದೆಯಡಿ ಸೆಕ್ಷನ್ -17 ಎ ಪ್ರಕಾರ ಲೋಕಾಯುಕ್ತವು ಅನುಮತಿ ಕೇಳಿತ್ತು. ಆದರೂ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಡಿ ಎಂದು ಸಚಿವ ಸಂಪುಟ ಮನವಿ ಮಾಡಿತ್ತು. ರಾಜ್ಯಪಾಲರು ಮಾನ್ಯ ಮಾಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜಭವನ ರಾಜಕೀಯ ಕಚೇರಿಯಾಗಬಾರದು
ರಾಜ್ಯಪಾಲರ ಕಚೇರಿ ರಾಜಕೀಯ ಕಚೇರಿ ಆಗಬಾರದು. ಸರ್ಕಾರವನ್ನು ಅಸ್ಥಿರಗೊಳಿಸಲು ಕಚೇರಿ ದುರ್ಬಳಕೆ ಆಗಬಾರದು.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ವಿಧಾನಸೌಧ ಈಗ ಕಾಂಗ್ರೆಸ್ ಕಚೇರಿ
ರಾಜಭವನವನ್ನು ಬಿಜೆಪಿ ಕಚೇರಿ ಎಂದು ಕಾಂಗ್ರೆಸ್ಸಿಗರು ಟೀಕಿಸಿದ್ದಾರೆ. ಹಾಗಾದರೆ ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಎನ್ನಬೇಕಾಗುತ್ತದೆ.
- ಆರ್. ಅಶೋಕ್, ಪ್ರತಿಪಕ್ಷ ನಾಯಕ
ರಾಜಭವನ ಬದಲಾಗಿಮುಡಾ ಚಲೋ ಮಾಡಿ
ಕಾಂಗ್ರೆಸ್‌ನವರು ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಿ ಕ್ಷಮೆ ಕೇಳಲಿ. ನಿವೇಶನ ತೆಗೆದುಕೊಂಡಿದ್ದು ತಪ್ಪಾಯಿತು ಎಂದು ಹೇಳಲಿ
- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ