ನಿಮ್ಮೆಲ್ಲರ ಸಹಕಾರದಿಂದ ಭವ್ಯವಾದ ಕಾಂಗ್ರೆಸ್ ಭವನ ನಿರ್ಮಾಣ ಮಾಡುತ್ತಿದ್ದೇವೆ. ಮಾಜಿ ಶಾಸಕ ಎಚ್.ಪಿ. ಮಂಜುನಾಥ ಅವರ ತಂದೆ ಪ್ರೇಮ ಕುಮಾರ್ ಅವರ 5 ಲಕ್ಷ ರು. ಹಣ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ರೀತಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಕ್ತಿಯಾನುಸರ ದೇಣಿಗೆ ನೀಡಬೇಕು.

 ಮೈಸೂರು : ಮೈಸೂರು ನಗರದಲ್ಲಿ ಕಾಂಗ್ರೆಸ್‌ಭವನ ನಿರ್ಮಾಣಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರು ತನುಮನ, ಧನ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಜೆ.ಎಲ್‌.ಬಿ.ರಸ್ತೆಯಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಈವರೆಗೂ ಸ್ವಂತ ಕಟ್ಟಡ ಇರಲಿಲ್ಲ. ಡಿ.ದೇವರಾಜ ಅರಸು ಅವರ ಅವಧಿಯಲ್ಲಿ ಜಾಗ ನೀಡಲಾಗಿತ್ತು. ಆದರೆ ಈವರೆಗೂ ಕಟ್ಟಡ ನಿರ್ಮಿಸಿಕೊಳ್ಳಲು ಆಗಿರಲಿಲ್ಲ ಎಂದರು.

ಈ ಭೂಮಿಯನ್ನು ಹುಷಾರಾಗಿ ಉಳಿಸಿಕೊಂಡಿದ್ದಕ್ಕೆ ಧನ್ಯವಾದಗಳು. 100 ವರ್ಷ ಕಳೆದರೂ ತಿವಾರಿ ಅವರು ನಿವೇಶನವನ್ನು ಇಷ್ಟು ವರ್ಷಗಳ ಕಾಲ ಉಳಿಸಿಕೊಂಡು ಬಂದಿದ್ದಾರೆ. ಭೂಮಿ ನೀಡಿದ ಎಲ್ಲ ಧರ್ಮಾದರ್ಶಿಗಳಿಗೆ ಧನ್ಯವಾದ ಎಂದರು.

ನಿಮ್ಮೆಲ್ಲರ ಸಹಕಾರದಿಂದ ಭವ್ಯವಾದ ಕಾಂಗ್ರೆಸ್ ಭವನ ನಿರ್ಮಾಣ ಮಾಡುತ್ತಿದ್ದೇವೆ. ಮಾಜಿ ಶಾಸಕ ಎಚ್.ಪಿ. ಮಂಜುನಾಥ ಅವರ ತಂದೆ ಪ್ರೇಮ ಕುಮಾರ್ ಅವರ 5 ಲಕ್ಷ ರು. ಹಣ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ರೀತಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಕ್ತಿಯಾನುಸರ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.

ಒಂದು ವರ್ಷದ ಅವಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಗಿಯಬೇಕು. ಒಳ್ಳೆಯ ಗುತ್ತಿಗೆದಾರರನ್ನು ಹುಡುಕಿ ಕಟ್ಟಡ ನಿರ್ಮಿಸಬೇಕು. ಕಟ್ಟಡ ನಿರ್ಮಾಣ ಸಮಿತಿಗೆ ಯತೀಂದ್ರ ಸಂಚಾಲಕ. ತಾವೆಲ್ಲರೂ ಸೇರಿ ಈ ಭವನ ನಿರ್ಮಾಣವನ್ನು ಪೂರ್ಣಗೊಳಿಸಬೇಕು. ಏಕೆಂದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂದಿರಾ ಕಾಂಗ್ರೆಸ್ ಭವನ ನಿರ್ಮಾಣ ಆಗುತ್ತಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ 100 ವರ್ಷಗಳ ಸ್ಮರಣಾರ್ಥ ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲಾಗುತ್ತಿದೆ. ಅದರಂತೆ ಮೈಸೂರ ನಗರ ಮತ್ತು ಜಿಲ್ಲೆಯ 5 ತಾಲೂಕುಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ ಎಂದರು.

ಮೈಸೂರಿನಲ್ಲಿ ಇಷ್ಟು ವರ್ಷ ಕಳೆದರೂ ಕಾಂಗ್ರೆಸ್ ನಿರ್ಮಾಣವಾಗದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದೆ. ಈಗ ಕಾಲ ಕೂಡಿ ಬಂದಿದೆ. ಕಾರ್ಯಕರ್ತರು ನೂರು, ಸಾವಿರ ರುಪಾಯಿ ಆದರೂ ತಮ್ಮ ವಂತಿಕೆ ನೀಡಬೇಕು ಎಂದರು.

ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ಕಾಲ ಚಕ್ರ ತಿರುಗಿದಂತೆ ನಡೆಯುತ್ತಿರುತ್ತದೆ. ನಿಮ್ಮ ಗುರುತುಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ವಂತಿಕೆ ಕೊಡಬೇಕು. ಇಲ್ಲಿ ನಿರ್ಮಾಣವಾಗುವ ಭವನ ಕೇವಲ ಕಾಂಗ್ರೆಸ್ ಭವನ ಅಲ್ಲ. ಕಾರ್ಯಕರ್ತರಿಗೆ ದೇವಸ್ಥಾನ. ಪ್ರಜಾಪ್ರಭುತ್ವವನ್ನು ಉಳಿಸುವ ಸೌಧ ಎಂದು ಬಣ್ಣಿಸಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಕಾಂಗ್ರೆಸ್ ಭವನ ನಿರ್ಮಾಣ ಬಹು ದಿನಗಳ ಕನಸಾಗಿತ್ತು. ಡಿ. ದೇವರಾಜ ಅರಸು, ಚಂದ್ರಪ್ರಭ ಅರಸ್, ಅಜೀಜ್ ಸೇಠ್ ಈ ಆಸ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟರು. ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಮತ್ತು ಸಾಹುಕಾರ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ ಘಟಕದಿಂದ ತಲಾ 5 ಲಕ್ಷ ರು. ಚೆಕ್ಕ ಅನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದರು.

ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಒಟ್ಟಿಗೆ ಪೂಜೆ ಮತ್ತು ಶಿಲಾನ್ಯಾಸದ ಕಲ್ಲನ್ನು ಅನಾವರಣಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ಸಚಿವರು, ಶಾಸಕರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮಹಿಳಾ ಘಟಕಗಳು ತಮ್ಮ ಶಕ್ತಿಯಾನುಸಾರು ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ವಂತಿಕೆ ನೀಡಬೇಕು ಎಂದು ಇಬ್ಬರು ನಾಯಕರೂ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶು ಸಂಗೋಪನ ಸಚಿವ ಕೆ. ವೆಂಕಟೇಶ, ಶಾಸಕರಾದ ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಡಿ. ರವಿಶಂಕರ್, ಸಂಸದ ಸುನಿಲ್‌ಬೋಸ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಎಚ್.ಎನ್. ರೇವಣ್ಣ, ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ವಿಧಾನ ಪರಿಷತ್ ಡಾ.ಡಿ. ತಿಮ್ಮಯ್ಯ, ಭವನ ನಿರ್ಮಾಣ ಸಮಿತಿ ಸಂಚಾಲಕ ಚಂದ್ರಮೌಳಿ, ಎಚ್.ಎನ್. ಪ್ರೇಮಕುಮಾರ್, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌, ದೇವರಾಜು ಅವರ ಮೊಮ್ಮಗ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಸೂರಜ್ ಹೆಗಡೆ ಮೊದಲಾದವರು ಇದ್ದರು.

ಅಂದು ಅನುಪಸ್ಥಿತಿಯಲ್ಲಿ ಸ್ವಾಗತಕ್ಕೆ ಸಿಎಂ ನಿರಾಕರಣೆ, ಇಂದು ಡಿಸಿಎಂ ಆ ರೀತಿ ಮಾಡಲಿಲ್ಲ...

ಮೈಸೂರಿನಲ್ಲಿ ಕಳೆದ ತಿಂಗಳು ನಡೆದಿದ್ದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಅನುಪಸ್ಥಿತಿಯಲ್ಲಿ ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದರು. ಆದರೆ, ಇವತ್ತು ಮೈಸೂರಿನಲ್ಲಿಯೇ ನಡೆದ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನ ಶಂಕುಸ್ಥಾಪನಾ ಸಮಾರಂಭದಲ್ಲಿ ಸಿಎಂ. ಗೈರು ಹಾಜರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ವಾಗತ ಕೋರಿದರು.

ಈ ಇಬ್ಬರು ಜೊತೆಯಾಗಿಯೇ ವಿಮಾನ ನಿಲ್ದಾಣದಿಂದ ಸಮಾರಂಭ ಸ್ಥಳಕ್ಕೆ ಬಂದರು. ಆದರೆ, ಸಿಎಂಗೆ ವರುಣ ಕ್ಷೇತ್ರದ ಹದಿನಾರು ಗ್ರಾಮದಲ್ಲಿ ಮತ್ತೊಂದು ಕಾರ್ಯಕ್ರಮ ಇದ್ದಿದ್ದರಿಂದ ತಮ್ಮ ಭಾಷಣದ ನಂತರ ನಿರ್ಗಮಿಸಿದರು. ಅವರೊಂದಿಗೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ ಸಹ ತೆರಳಿದರು. ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರಿಗೂ ಅನುಪಸ್ಥಿತಿಯಲ್ಲಿ ಸ್ವಾಗತ ಕೋರಿದರು.

ಸಾಧನಾ ಸಮಾವೇಶ ನಡೆದ ದಿನ ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಥಳದಿಂದ ನಿರ್ಗಮಿಸಿದದ್ದರು. ಕೊನೆಯಲ್ಲಿ ಮಾತಿಗೆ ನಿಂತ ಸಿದ್ದರಾಮಯ್ಯ ಅವರಿಗೆ ಮುಖಂಡರೊಬ್ಬರು ಡಿ.ಕೆ.ಶಿವಕುಮಾರ್‌ ಅವರಿಗೂ ಅನುಪಸ್ಥಿತಿಯಲ್ಲಿ ಸ್ವಾಗತ ಕೋರಿ ಎಂದಾಗ ಸಿಡಿಮಿಡಿಕೊಂಡು ವೇದಿಕೆಯಲ್ಲಿ ಇರೋರಿಗೆ ಮಾತ್ರ ಸ್ವಾಗತಿಸೋದು. ಇಲ್ಲದವರಿಗೆ, ಮನೆಯಲ್ಲಿ ಇರುವವರಿಗೆಲ್ಲಾ ಸ್ವಾಗತ ಕೋರಲ್ಲ ಎಂದು ಖಂಡಿತುಂಡವಾಗಿ ಹೇಳಿದ್ದು, ವಿವಾದಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಸಿಎಂ, ಸಚಿವರೊಂದಿಗೆ ಜಗಳ:

ಕಾಂಗ್ರೆಸ್‌ ಕಚೇರಿ ನಿರ್ಮಾಣ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಜೊತೆ ನಾನು ಗಲಾಟೆ ಮಾಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದಲ್ಲಿ ಶನಿವಾರ ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಭವನಕ್ಕೆ ಹಣ ಕೊಡಬೇಕು. ಶಾಸಕರ ಮನೆಯಲ್ಲಿ ಆಫೀಸ್ ಮಾಡುವುದು ಮುಖ್ಯವಲ್ಲ. ಪ್ರತಿಯೊಂದು ತಾಲೂಕಿನಲ್ಲೂ ಕಾಂಗ್ರೆಸ್ ಕಚೇರಿ ನಿರ್ಮಾಣವಾಗಬೇಕು. ಆಗ ಮಾತ್ರ ಕಾಂಗ್ರೆಸ್ ಗೆ ದೊಡ್ಡ ಉಡುಗೊರೆ ನೀಡಿದಂತಾಗುತ್ತದೆ ಎಂದರು.

ಈಗಾಗಲೇ ಹಲವು ಶಾಸಕರು ಕಾಂಗ್ರೆಸ್ ಕಚೇರಿಯನ್ನು ಗಿಫ್ಟ್ ಮಾಡಿದ್ದಾರೆ. ಶಾಸಕರಿಗೆ ಇದು ದೊಡ್ಡ ವಿಚಾರವಲ್ಲ. ಇಬ್ಬರು ಸಚಿವರು ಕಾರ್ಯಕ್ರಮದಿಂದ ತೆರಳಿದ್ದಾರೆ.

ಅವರೆಲ್ಲಾ ಇದಿದ್ದರೆ ಇವತ್ತೇ ಎಲ್ಲರೂ ಎಷ್ಟು ದುಡ್ಡು ಕೊಡುತ್ತಾರೆ ಎಂಬುದನ್ನು ಘೋಷಣೆ ಮಾಡಿಸುತ್ತಿದ್ದೆ ಎಂದರು.

ಮುಂದಿನ ಸಿಎಂ ಘೋಷಣೆ:

ಡಿ.ಕೆ.ಶಿವಕುಮಾರ್‌ ಅವರು ಭಾಷಣ ಮಾಡುತ್ತಿದ್ದ ವೇಳೆಯೇ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದು ವಿಶೇಷವಾಗಿತ್ತು.