ಒಕ್ಕಲಿಗರ ನಾಯಕತ್ವ ಅಳಿಸಲು ಕಾಂಗ್ರೆಸ್ ಸಂಚು: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ

| Published : Mar 16 2024, 01:46 AM IST

ಒಕ್ಕಲಿಗರ ನಾಯಕತ್ವ ಅಳಿಸಲು ಕಾಂಗ್ರೆಸ್ ಸಂಚು: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ತಿಂಗಳಿನಿಂದ ಇಡೀ ಜಿಲ್ಲೆಯ ಎಲ್ಲ ಮುಖಂಡರಿಗೂ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಾವೆಲ್ಲಿ ಮಾತನಾಡಿದರೆ ತಪ್ಪಾಗುತ್ತದೋ ಎಂದು ಸಾಮೂಹಿಕವಾಗಿ ಮೌನವಾಗಿದ್ದೆವು. ಇನ್ನು ಮೌನವಾಗಿರಲು ಸಾಧ್ಯವಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಅದೂ ಕಡಿಮೆ ಅಂತರದಿಂದ, ನೀವೆಲ್ಲಾ ಎಷ್ಟು ಮತಗಳಿಂದ ಸೋತಿದ್ದೀರಿ ಎಂಬುದನ್ನು ಜ್ಞಾಪಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಳೇ ಮೈಸೂರು ಪ್ರಾಂತ್ಯದಲ್ಲಿ ಬೇರೂರಿರುವ ಒಕ್ಕಲಿಗರ ನಾಯಕತ್ವವನ್ನೇ ಅಳಿಸಲು ಕಾಂಗ್ರೆಸ್‌ನವರು ಹೊರಟಿದ್ದಾರೆ. ಇದಕ್ಕೆ ಒಕ್ಕಲಿಗರು ಅವಕಾಶ ಮಾಡಿಕೊಡಬಾರದು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಇಡೀ ಒಕ್ಕಲಿಗರ ನಾಯಕತ್ವವನ್ನೇ ಕೀಳಲು ಹೊರಟಿದ್ದಾರೆ. ಒಕ್ಕಲಿಗರ ನಾಯಕತ್ವ ಉಳಿಯಬೇಕಾದರೆ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕೆಂದು ಕೋರಿದರು.

ಇಸ್ಪೀಟ್ ದಂಧೆ ನಡೆಸುತ್ತಿರುವ ಶಾಸಕ ಜಾ.ದಳದಲ್ಲಿ ಯಾರೂ ಗಂಡಸರಿಲ್ಲವೇ ಎಂದು ಪ್ರಶ್ನಿಸುತ್ತಾನೆ?, ಕ್ಯಾಸಿನೋ ನಡೆಸುತ್ತಿದ್ದವರನ್ನು ಜನ ಗೆಲ್ಲಿಸಿರುವುದರಿಂದ ಆ ಕ್ಷೇತ್ರದಲ್ಲಿ ಜೂಜು ಕೇಂದ್ರಗಳು ತಲೆಎತ್ತಿವೆ. ಇಂತಹವರಿಂದ ಬಡವರ, ರೈತರ ಉದ್ಧಾರ ಸಾಧ್ಯವೇ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ವಿರುದ್ಧ ಹರಿಹಾಯ್ದರು.

ಕಳೆದ ಮೂರು ತಿಂಗಳಿನಿಂದ ಇಡೀ ಜಿಲ್ಲೆಯ ಎಲ್ಲ ಮುಖಂಡರಿಗೂ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಾವೆಲ್ಲಿ ಮಾತನಾಡಿದರೆ ತಪ್ಪಾಗುತ್ತದೋ ಎಂದು ಸಾಮೂಹಿಕವಾಗಿ ಮೌನವಾಗಿದ್ದೆವು. ಇನ್ನು ಮೌನವಾಗಿರಲು ಸಾಧ್ಯವಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಅದೂ ಕಡಿಮೆ ಅಂತರದಿಂದ, ನೀವೆಲ್ಲಾ ಎಷ್ಟು ಮತಗಳಿಂದ ಸೋತಿದ್ದೀರಿ ಎಂಬುದನ್ನು ಜ್ಞಾಪಿಸಿಕೊಳ್ಳಿ ಎಂದು ಛೇಡಿಸಿದರು.

ಜಿಲ್ಲೆಗೆ ನ್ಯಾಯ ಸಿಗಬೇಕಾದರೆ ಪ್ರಮುಖ ನಾಯಕತ್ವ ಸಿಗಬೇಕು. ಅದು ಎಚ್.ಡಿ. ಕುಮಾರಸ್ವಾಮಿ ಅವರಿಂದ ಮಾತ್ರ ಸಾಧ್ಯ. ರೈತರಿಗೆ, ಬಡವರಿಗೆ ಸಮಾನವಾಗಿ ಅನುಕೂಲವಾಗಬೇಕಾದರೆ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಕೃಷಿ ಸಚಿವರಾಗಬೇಕು. ವರಿಷ್ಠರು ಒಳ್ಳೆಯ ತೀರ್ಮಾನ ತೆಗೆದುಕೊಂಡು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಹೇಳುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಒತ್ತಾಯಿಸಿದರು.