ಮುಡಾ ಸೈಟ್ ಹಂಚಿಕೆ ಪ್ರಕರಣ : ಗೌರ್ನರ್ ವಿರುದ್ಧ ಜಿಲ್ಲೆಗಳಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ: ಡಿ.ಕೆ.ಶಿವಕುಮಾರ್

| Published : Aug 19 2024, 07:52 AM IST / Updated: Aug 19 2024, 07:53 AM IST

Siddaramaiah and DK Shivakumar

ಸಾರಾಂಶ

ಮುಡಾ ಸೈಟ್ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅಕ್ರಮವಾಗಿ ತನಿಖೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆ೦ಗಳೂರು : ಮುಡಾ ಸೈಟ್ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅಕ್ರಮವಾಗಿ ತನಿಖೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಪಾಲ್ಗೊಳ್ಳಲಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಭಟನೆ ಬಗ್ಗೆ ಖುದ್ದು ಮಾಹಿತಿ ನೀಡಿದ ಶಿವಕುಮಾರ್, ರಾಜ್ಯಪಾಲರ ಕ್ರಮ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೇಂದ್ರ ಬಿಜೆಪಿ ಹಾಗೂ ರಾಜ್ಯಪಾಲರ ರಾಜಕೀಯಷಡ್ಯಂತ್ರದ ವಿರುದ್ದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು. ಇನ್ನು ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ಹೊಡೆಯುವಂತಹ ಶಾಂತಿಗೆ ಭಂಗ ತರುವ ಕೆಲಸ ಮಾಡುವ ಸಾಧ್ಯತೆಯಿದೆ. ಹೀಗಾಗಿ ಸ್ವಲ್ಪ ಹುಷಾರಾಗಿ ಪ್ರತಿಭಟನೆ ಮಾಡಿ ಎಂದು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ಕಗ್ಗೋಲೆ: ರಾಜ್ಯಪಾಲರ ಕ್ರಮ ಖಂಡನೀಯ. ಸಚಿವ ಸಂಪುಟ ಸಭೆಯ ಸಲಹೆಯನ್ನು ಹಾಗೂ ಸಂವಿಧಾನವನ್ನು ಧಿಕ್ಕರಿಸಿ ಅಕ್ರಮವಾಗಿ ಅನುಮತಿ ನೀಡಿದ್ದಾರೆ. ಕೇಂದ್ರದ ಕೈಗೊಂಬೆಯಾಗಿ ವರ್ತಿಸುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ನಡೆದುಕೊಂಡಿದ್ದಾರೆ. ಪ್ರಜಾ ಪ್ರಭುತ್ವದ ಕಗ್ಗೋಲೆ ಮಾಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಖಂಡರಿಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ಶಾಂತಿಯುತ ಪ್ರತಿಭಟನೆ: ನಮ್ಮದು ಗಾಂಧಿ ತತ್ವ, ರಾಜ್ಯಪಾಲರ ಕಾನೂನು ಬಾಹಿರ ಕ್ರಮದ ಬಗ್ಗೆ ದೇಶಕ್ಕೆ ಸಂದೇಶ ಕೊಡಬೇಕು. ಹೀಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.ಎಐಸಿಸಿಮಟ್ಟದಲ್ಲಿ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗಿನ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖರ್ಗೆ ಅವರಿಗೆ ವರದಿ ಕೊಡಬೇಕು. ಹಾಗಾಗಿ ಭೇಟಿ ಮಾಡಿದ್ದೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂದು ತಿಳಿಸಿದರು.