ಮತ್ತೆ ಅಸೆಂಬ್ಲಿ ಗೆಲ್ಲಲು ಕಾಂಗ್ರೆಸ್‌ ಸರಣಿ ಸಭೆ ಶುರು

| Published : Jun 15 2024, 10:36 AM IST

Congress flag

ಸಾರಾಂಶ

ರಾಜ್ಯ ಕಾಂಗ್ರೆಸ್‌ ಪಕ್ಷವು ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ತಯಾರಿ ಕುರಿತ ಮೂರು ದಿನಗಳ ಸರಣಿ ಸಭೆಗಳಿಗೆ ಶುಕ್ರವಾರ ಚಾಲನೆ 

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಪಕ್ಷವು ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ತಯಾರಿ ಕುರಿತ ಮೂರು ದಿನಗಳ ಸರಣಿ ಸಭೆಗಳಿಗೆ ಶುಕ್ರವಾರ ಚಾಲನೆ ನೀಡಿದ್ದು, ವಾಲ್ಮೀಕಿ ನಿಗಮದ ಹಗರಣವನ್ನು ಬಿಜೆಪಿಗೆ ತಿರುಗುಬಾಣವಾಗಿ ಮಾಡಲು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ 87 ಕ್ಷೇತ್ರಗಳಲ್ಲಿ ಪಕ್ಷ ಬಲಪಡಿಸುವ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕೆಪಿಸಿಸಿಯ ಇಂದಿರಾ ಗಾಂಧಿ ಭವನದಲ್ಲಿ ಹಿರಿಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಾಯಿತು.

ಈ ವೇಳೆ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆಯಾಗಿದ್ದು, ಇದೇ ರೀತಿ ರಾಜ್ಯ ಸರ್ಕಾರ ಹಾಗೂ ಸರ್ಕಾರದಲ್ಲಿನ ಪ್ರಮುಖರನ್ನು ಟ್ರ್ಯಾಪ್‌ ಮಾಡಲು ಪ್ರಯತ್ನ ನಡೆಯುತ್ತಿದೆ. ಅವುಗಳ ಬಗ್ಗೆ ಎಚ್ಚರ ವಹಿಸಬೇಕು. ಜತೆಗೆ ವಾಲ್ಮೀಕಿ ನಿಗಮದಲ್ಲಿ ಹಿಂದಿನ ಅವಧಿಯಲ್ಲಿ ನಡೆದಿರುವ ಹಣಕಾಸು ಅಕ್ರಮ ವರ್ಗಾವಣೆಗಳನ್ನು ಹೊರಗೆ ತೆಗೆಯಬೇಕು. ಬಿಜೆಪಿ ಅವಧಿಯಲ್ಲಿ ನಡೆದಿರುವ ಯಾವುದೇ ಅಕ್ರಮ ಗಮನಕ್ಕೆ ಬಂದರೂ ಪಕ್ಷ ಅಥವಾ ಸರ್ಕಾರದ ಗಮನಕ್ಕೆ ತರಬೇಕು. ತನ್ಮೂಲಕ ಹಗರಣದ ಆರೋಪವನ್ನು ಬಿಜೆಪಿಗೆ ತಿರುಗುಬಾಣವಾಗಿ ಮಾಡಲು ಕೆಲಸ ಮಾಡಬೇಕು ಎಂದು ಶಿವಕುಮಾರ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸೋತ ಕ್ಷೇತ್ರಗಳಿಗೆ ಒತ್ತು ಕೊಡಬೇಕು:

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು 87 ಕ್ಷೇತ್ರಗಳಲ್ಲಿ ಸೋತಿದ್ದಾರೆ. ಅವುಗಳನ್ನು ಮುಂದಿನ ಬಾರಿ ಗೆಲ್ಲಲು ಈಗಲೇ ಸಿದ್ಧತೆ ಶುರು ಮಾಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಕೆಲಸಗಳನ್ನು ಮಾಡಿಕೊಡುವ ಮೂಲಕ ಅಭ್ಯರ್ಥಿಯ ಕೈ ಬಲಪಡಿಸಬೇಕು. ಜತೆಗೆ ಬೇರೆ ಏನೇನು ಕೆಲಸ ಮಾಡಬೇಕು ಎಂಬುದರ ಬಗ್ಗೆ ನಾಯಕರು ಸಲಹೆ ನೀಡಬೇಕು ಎಂದು ಸೂಚಿಸಿದರು.

ಇನ್ನು ಪದಾಧಿಕಾರಿಗಳು ಮೂರು ಸಭೆಗಳಿಗೆ ಬಾರದಿದ್ದರೆ ಅವರನ್ನು ಜವಾಬ್ದಾರಿಯಿಂದ ತೊಲಗಿಸಲಾಗುವುದು. ಪದಾಧಿಕಾರಿಗಳು, ನಾಯಕರು ನಿರಂತರವಾಗಿ ಪಕ್ಷದ ಕೆಲಸ ಮಾಡಬೇಕು. ಪಕ್ಷದ ಕಾರ್ಯಕರ್ತರನ್ನು ಗೌರವಿಸಿ ಅವರ ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ಟ್ರ್ಯಾಪ್‌ ಮಾಡಲು ಪ್ರಯತ್ನ- ಡಿಕೆಶಿ:

ಸಭೆ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಲು ಹಾಗೂ ತಳಮಟ್ಟದಿಂದ ಪಕ್ಷ ಬಲಪಡಿಸಲು ನಾಯಕರು ಸಲಹೆ ನೀಡಿದ್ದಾರೆ. ಪಕ್ಷ ಸಂಘಟನೆಗೂ ಮಾರ್ಗದರ್ಶನ ನೀಡಿದ್ದಾರೆ. ಇನ್ನು ಕೆಲವು ಮಂದಿ ನಮ್ಮನ್ನು ಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಲಾಗಿದೆ ಎಂದರು.

ಪಕ್ಷದ ಮೂಲ ಸಿದ್ಧಾಂತವನ್ನು ಯಾವ ಕಾರಣಕ್ಕೂ ಕೈ ಬಿಡಬಾರದು ಎಂದು ಹಿರಿಯ ನಾಯಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜತೆಗೆ ನಿಗಮ- ಮಂಡಳಿಗಳ ಅಧ್ಯಕ್ಷರುಗಳ ಸಭೆ ಕರೆದಿದ್ದು, ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಜನರ ಬಳಿ ವರ್ತನೆ ಹೇಗಿರಬೇಕು, ಕೆಲಸಗಳನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂಬ ಬಗ್ಗೆ ಸಲಹೆ ನೀಡಲಾಗುವುದು ಎಂದು ಹೇಳಿದರು.

  ಇಂದು ಮುಂಚೂಣಿ ಘಟಕಗಳ ಸಭೆ: 

\Bಕಾಂಗ್ರೆಸ್‌ನ ಸರಣಿ ಸಭೆಗಳ ಮುಂದುವರೆದ ಭಾಗವಾಗಿ ಇಂದು (ಶನಿವಾರ) ಕೆಪಿಸಿಸಿ ಮುಂಚೂಣಿ ಘಟಕಗಳು ಹಾಗೂ ಬೆಂಗಳೂರು ನಗರ ಭಾಗದ ನಾಯಕರ ಸಭೆ ನಡೆಯಲಿದೆ. ಮುಖ್ಯವಾಗಿ \Bಬಿಬಿಎಂಪಿ ವ್ಯಾಪ್ತಿಗೆ ಬರುವ ಬ್ಲಾಕ್‌ ಅಧ್ಯಕ್ಷರು, ಶಾಸಕರು, ಬಿಬಿಎಂಪಿ ಮಾಜಿ ಸದಸ್ಯರು ಸಭೆಗೆ ಆಗಮಿಸಲಿದ್ದು, ಬಿಬಿಎಂಪಿ ಚುನಾವಣೆ ಹಾಗೂ ಬಿಬಿಎಂಪಿ ವಿಭಜನೆ ಕುರಿತು ಚರ್ಚಿಸುವ ಸಾಧ್ಯತೆಯಿದೆ.

ವಾಲ್ಮೀಕಿ ನಿಗಮ ಅಕ್ರಮ ಬಿಜೆಪಿಗೆ ತಿರುಗು ಬಾಣ ಮಾಡಲು ಚರ್ಚೆ ।

ದ್ವೇಷ ರಾಜಕಾರಣ ಅಗತ್ಯವಿಲ್ಲ- ಡಿಕೆಶಿ:

ಯಡಿಯೂರಪ್ಪ ಅವರ ವಿರುದ್ಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ನಾವ್ಯಾಕೆ ದ್ವೇಷದ ರಾಜಕಾರಣ ಮಾಡಬೇಕು. ನಮಗೆ ಅವಶ್ಯಕತೆ ಏನಿದೆ? ಕಾನೂನಿನ ಪ್ರಕಾರ ಎಲ್ಲವೂ ಆಗಿದೆ. ನನಗೂ ಸಂಪೂರ್ಣ ವಿಚಾರ ತಿಳಿದಿಲ್ಲ. ಮಾಧ್ಯಮದಲ್ಲಿ ತಿಳಿಸಿದ ವಿಚಾರಗಳು ಮಾತ್ರ ಗೊತ್ತು. ನಾನೂ ಇದಕ್ಕೆಲ್ಲಾ ಮೂಗು ತೂರಿಸಲು ಹೋಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.