ಬಿಜೆಪಿ ಹಾಗೂ ಚುನಾವಣಾ ಆಯೋಗ ಮತಗಳ್ಳತನದಲ್ಲಿ ತೊಡಗಿವೆ ಎಂದು ಆರೋಪಿಸಿ ಅ.10ರಿಂದ ಅ.20ರವರೆಗೆ ಪ್ರತಿ ಬ್ಲಾಕ್ ಮಟ್ಟದಲ್ಲಿ ‘ಮತ ಉಳಿಸಿ ದೇಶ ಉಳಿಸಿ’ ಪಾದಯಾತ್ರೆ ನಡೆಸುತ್ತೇವೆ. ಜತೆಗೆ ಅ.25 ರಿಂದ ನ.25ರವರೆಗೆ ಒಂದು ತಿಂಗಳ ಕಾಲ ಸಾರ್ವಜನಿಕ ಸಭೆ ಹಾಗೂ ಮಾಧ್ಯಮಗೋಷ್ಠಿ ಮೂಲಕ ಜನ ಜಾಗೃತಿ
ಬೆಂಗಳೂರು : ಬಿಜೆಪಿ ಹಾಗೂ ಚುನಾವಣಾ ಆಯೋಗ ಮತಗಳ್ಳತನದಲ್ಲಿ ತೊಡಗಿವೆ ಎಂದು ಆರೋಪಿಸಿ ಅ.10ರಿಂದ ಅ.20ರವರೆಗೆ ಪ್ರತಿ ಬ್ಲಾಕ್ ಮಟ್ಟದಲ್ಲಿ ‘ಮತ ಉಳಿಸಿ ದೇಶ ಉಳಿಸಿ’ ಪಾದಯಾತ್ರೆ ನಡೆಸುತ್ತೇವೆ. ಜತೆಗೆ ಅ.25 ರಿಂದ ನ.25ರವರೆಗೆ ಒಂದು ತಿಂಗಳ ಕಾಲ ಸಾರ್ವಜನಿಕ ಸಭೆ ಹಾಗೂ ಮಾಧ್ಯಮಗೋಷ್ಠಿ ಮೂಲಕ ಜನ ಜಾಗೃತಿ ಮೂಡಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಪ್ರತಿ ಬಾರಿ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ ಬಳಿಕ ರಾಷ್ಟ್ರಗೀತೆ ಹಾಡಿ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹನ ಮಾಡುತ್ತೇವೆ. ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಈ ಹೋರಾಟ ಮೂಲಕ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸೇರಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಈ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ನಾಯಕರು ಅವರವರ ಜಿಲ್ಲೆಗಳ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಬ್ಲಾಕ್ ಅಧ್ಯಕ್ಷರು ಹಾಗೂ ಬಿಎಲ್ಎ2ಗಳಿಗೆ ಈ ಅಕ್ರಮದಿಂದ ಆಗುವ ಅನಾಹುತ ತಡೆಗಟ್ಟಲು ಮಾರ್ಗದರ್ಶನ ನೀಡುತ್ತೇವೆ. ಇನ್ನು ಫಾರಂ 7 ಹಾಗೂ ಇತರ ಮೂಲಕ ಯಾರ ಹೆಸರನ್ನು ಮತಪಟ್ಟಿಯಿಂದ ಬಿಡಲಾಗಿದೆಯೋ ಅವರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುತ್ತೇವೆ ಎಂದು ಹೇಳಿದರು.
ಬುಧವಾರ ವಿಜಯಪುರ ಜಿಲ್ಲೆಯಲ್ಲಿ ಜೀವಂತವಾಗಿರುವ ಮಹಿಳೆಯರನ್ನು ಮರಣ ಪಟ್ಟಿಯಲ್ಲಿ ಸೇರಿಸಿದ್ದು, ಅವರ ಮರಣ ಪ್ರಮಾಣಪತ್ರ ಕೂಡ ಸಲ್ಲಿಕೆ ಮಾಡಲಾಗಿದೆ. ಇದನ್ನು ನೋಡಿದರೆ ಚುನಾವಣಾ ಆಯೋಗದ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವುದು ಸಾಬೀತಾಗುತ್ತದೆ. ಇನ್ನು ಮಲ್ಲೇಶ್ವರ ಕ್ಷೇತ್ರದಲ್ಲಿ 1211 ಮತಗಳನ್ನು ನಾವು ಗುರುತಿಸಿದ್ದು, ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಒಂದೇ ದಿನ 1108 ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ‘ಎಎಸ್‌ಡಿಡಿಒ’ ಮೂಲಕ ಹೆಸರು ಕೈಬಿಟ್ಟಿರುವವರಿಗೆ ಪಂಚಾಯ್ತಿ ಮಟ್ಟದಲ್ಲಿ ಸಮೀಕ್ಷೆ ಮಾಡಿ ಪರಿಶೀಲನೆ ಮಾಡಲಾಗುವುದು ಎಂದರು.
ಹರಿಪ್ರಸಾದ್ ನೇತೃತ್ವದಲ್ಲಿ ಸಭೆ:
ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಗುರುವಾರ ದಿನವಿಡೀ ಪಕ್ಷ ಸಂಘಟನೆ, ಬ್ಲಾಕ್ ಹಾಗೂ ಮಂಡಲ ಕಾಂಗ್ರೆಸ್ ಸಮಿತಿಗಳ ಪುನರ್ ರಚನೆ, ಮತದಾನ ಹಕ್ಕಿನ ರಕ್ಷಣೆಗಾಗಿ ರಾಜ್ಯವ್ಯಾಪಿ ಹೋರಾಟ ನಡೆಸುವ ಕುರಿತು ಸರಣಿ ಸಭೆ ನಡೆಸಲಾಯಿತು.
ಸಚಿವರಾದ ಸತೀಶ್ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮತ್ತಿತರರು ಹಾಜರಿದ್ದರು.
ದೆಹಲಿ ಪೊಲೀಸರಿಂದ ಗೂಂಡಾಗಿರಿ: ಬಿಕೆ
ಬುಧವಾರ ದೆಹಲಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇಂಡಿಯಾ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸುವಾಗ ದೆಹಲಿ ಪೊಲೀಸರು ಗೂಂಡಾಗಿರಿ ನಡೆಸಿದ್ದಾರೆ. ಕೆಲವು ಗೂಂಡಾಗಳನ್ನು ಪೊಲೀಸರ ಸಮವಸ್ತ್ರದಲ್ಲಿ ಕಳುಹಿಸಿ ಪ್ರತಿಭಟನಾಕಾರರ ವಿರುದ್ಧ ಹಲ್ಲೆ ಮಾಡಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ದೂರಿದರು.
