ಬೆಂಗಳೂರು : ಎಐಸಿಸಿ ವರುಷ್ಠರ ಎಚ್ಚರಿಕೆ ಬಳಿಕವೂ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಹೇಳಿಕೆ

| N/A | Published : Jan 27 2025, 01:47 AM IST / Updated: Jan 27 2025, 04:52 AM IST

ಬೆಂಗಳೂರು : ಎಐಸಿಸಿ ವರುಷ್ಠರ ಎಚ್ಚರಿಕೆ ಬಳಿಕವೂ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಮತ್ತು ಕೆಪಿಪಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಹೇಳಿಕೆ ನೀಡದಂತೆ ಎಐಸಿಸಿ ವರಿಷ್ಟರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನಂತರವೂ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಷಯವಾಗಿ ಚರ್ಚೆ ಮುಂದುವರಿದಿದೆ.

  ಬೆಂಗಳೂರುಸಿಎಂ ಮತ್ತು ಕೆಪಿಪಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಹೇಳಿಕೆ ನೀಡದಂತೆ ಎಐಸಿಸಿ ವರಿಷ್ಟರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನಂತರವೂ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಷಯವಾಗಿ ಚರ್ಚೆ ಮುಂದುವರಿದಿದೆ. ಚಿತ್ರದುರ್ಗದಲ್ಲಿ ಭಾನುವಾರ ಮಾತನಾಡಿದ ಸಚಿವ ಡಿ, ಸುಧಾಕರ್‌, ‘ಸಿದ್ದರಾಮಯ್ಯನವರು ತಾವೇ 5 ವರ್ಷ ಸಿಎಂ ಎಂದು ಹೇಳಿಲ್ಲ, ಕಾಂಗ್ರೆಸ್‌ ಐದು ವರ್ಷವೂ ಅಧಿಕಾರದಲ್ಲಿ ಇರುತ್ತೆ ಎಂದಷ್ಟೇ ಹೇಳಿದ್ದಾರೆ’ ಎಂದಿದ್ದಾರೆ. ಈ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರ ಪರೋಕ್ಷವಾಗಿ ಬ್ಯಾಟ್‌ ಬೀಸಿದ್ದಾರೆ.

ಆದರೆ, ಸುಧಾಕರ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಜಮೀರ್‌ ಅಹಮದ್‌ ಖಾನ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಚಾಮರಾಜನಗರ ಸಂಸದ ಸುನೀಲ್‌ ಬೋಸ್‌ ಅವರು, ‘ಸಿದ್ದು ಅವರೇ ಪೂಣಾರ್ವಧಿ ಸಿಎಂ ಆಗಿ ಮುಂದುವರಿಯುತ್ತಾರೆ, ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ’ ಎಂದು ಪ್ರತಿಪಾದಿಸಿದ್ದಾರೆ.

ಸುಧಾಕರ್ ಹೇಳಿದ್ದೇನು?:

ಚಿತ್ರದುರ್ಗದಲ್ಲಿ ಭಾನುವಾರ ಧ್ವಜಾರೋಹಣ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್‌, ಡಿಕೆಶಿ ಪರ ಪರೋಕ್ಷವಾಗಿ ಬ್ಯಾಟ್‌ ಬೀಸಿದರು. ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ‘ಸಿದ್ದು ಅವರು ನಾನೇ ಪೂರ್ಣಾವಧಿ ಅಧಿಕಾರಲ್ಲಿರುತ್ತೇನೆ ಎಂದು ಹೇಳಿಲ್ಲ, ನಾವೇ ಐದು ವರ್ಷ ಅಧಿಕಾರದಲ್ಲಿ ಇರ್ತೇವೆ ಎಂದಿದ್ದಾರೆ. ಅಂದರೆ, ಕಾಂಗ್ರೆಸ್‌ ಸರ್ಕಾರ 5 ವರ್ಷ ಅವಧಿ ಪೂರೈಸುತ್ತೆ’ ಎಂದರು.

ಬಳಿಕ, ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಇಲಾಖೆಯ ಸಚಿವ ಜಮೀರ್ ಅಹಮದ್, ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಇರುತ್ತಾರೆ, ಈಗ ಸಿಎಂ ಖುರ್ಚಿ ಖಾಲಿ ಇಲ್ಲ’ ಎಂದು ಸಮರ್ಥಿಸಿಕೊಂಡರು. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಖುರ್ಚಿಯೂ ಖಾಲಿ ಇಲ್ಲ ಎಂದರು.

ಇದೇ ವೇಳೆ, ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ‘ಅವರಂತಹ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಇದಕ್ಕಾಗಿಯೇ ನಾನು ಅವರ ಜೊತೆಗೆ ಇದ್ದೇನೆ. ಅವರು 5 ವರ್ಷಗಳ ಕಾಲ ಸಿಎಂ ಆಗಿರಬೇಕು ಎನ್ನುವುದರಲ್ಲಿ ಮೊದಲಿಗ’ ಎಂದರು.

ಈ ಮಧ್ಯೆ, ಚಾಮರಾಜನಗರದಲ್ಲಿ ಮಾತನಾಡಿದ ಸಂಸದ ಸುನೀಲ್‌ ಬೋಸ್‌, ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದು, ಅವರೇ 5 ವರ್ಷ ಮುಂದುವರಿಯುತ್ತಾರೆ. ಶಾಸಕರ ಬೆಂಬಲ, ಹೈಕಮಾಂಡ್ ಬೆಂಬಲ ಇರುವ ತನಕ ಅವರೇ ಮುಖ್ಯಮಂತ್ರಿ. 2.5 ವರ್ಷ ಅಧಿಕಾರ ಹಂಚಿಕೆ ಎಂಬ ಒಪ್ಪಂದ ಆದಂತೆ ಕಾಣುತ್ತಿಲ್ಲ ಎಂದರು.