ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ಕಾಯ್ದೆ ರದ್ದು ಮಾಡುವಂತೆ ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದರು, ಮಾಜಿ ಸಚಿವರು, ಶಾಸಕರು, ಸ್ವಾಮೀಜಿ ಸೇರಿ ಸಾವಿರಾರು ರೈತರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿರುವ ವಕ್ಫ್ ಹಠಾವೋ ಧರಣಿ ಸ್ಥಳದಲ್ಲಿ ನ.4ರಿಂದಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾಗಿಯಾಗಿದ್ದು, ಯತ್ನಾಳ್ ಅವರಿಗೆ ಬೆಂಬಲ ನೀಡಿದ್ದಾರೆ. ಬುಧವಾರ ಬೆಳಗ್ಗೆ ನಗರದ ಸೈಕ್ಲಿಸ್ಟ್‌ಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದು, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಕೂಡ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಕೂಡಲಸಂಗಮದ ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರು ಧರಣಿಗೆ ಬೆಂಬಲ ನೀಡಿದರು. ವ್ಯಾಪಾರಸ್ಥರ ಸಂಘ, ನೌಕರರ ಸಂಘ, ರೈತ ಸಂಘ, ಮರಾಠಾ ಸಮಾಜ, ಗೋಂಧಳಿ ಸಮಾಜ, ಹಿಂದೂ ಸಂಘಟನೆಗಳು ಸೇರಿ ಅನೇಕ ಸಂಘ-ಸಂಸ್ಥೆಗಳಿಂದ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ.ಡಿಸಿ, ಎಸಿಗೆ ಜಮೀರ್ ಧಮ್ಕಿ: ಯತ್ನಾಳ್ ಆರೋಪವಕ್ಫ್ ಸಚಿವ ಜಮೀರ್ ಅಹ್ಮದ್ ಬಂದು ಹೋದ ಮೇಲೆ ದಿಢೀರ್ ಆಗಿ ರೈತರ ಜಮೀನಿನಲ್ಲಿ ವಕ್ಫ್ ಹೆಸರು ನೋಂದಣಿಯಾಗಿದ್ದು, ನನ್ನ ಸಿಎಂ ಕಳಿಸಿದ್ದಾರೆಂದು ಜಮೀರ್ ಡಿಸಿ, ಎಸಿಗೆ ಧಮ್ಕಿ ಹಾಕಿದ್ದಾರೆ ಎಂದು ಶಾಸಕ ಯತ್ನಾಳ್ ಆರೋಪಿಸಿದ್ದಾರೆ.
ಅಹೋರಾತ್ರಿ ಧರಣಿ ಸ್ಥಳದಲ್ಲಿ ಬುಧವಾರ ಮಾತನಾಡಿ, ಢವಳಗಿ ಮಠದ 19 ಎಕರೆ ಖಬರಸ್ತಾನ್ ಆಗಿದೆ. ರಾಜ್ಯದಲ್ಲಿ ವಕ್ಫ್ ಜಾಗ ವಿಸ್ತಾರವಾಗುತ್ತಿದ್ದು, 1 ಲಕ್ಷ ಎಕರೆ ಇದ್ದದ್ದು 6 ಲಕ್ಷದ ದಾಟುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ನೋಟಿಸ್ ಹೋಗುತ್ತಿವೆ. ದೇಶದಲ್ಲಿರುವ ಮುಸ್ಲಿಂ ಏಜೆಂಟ್ ಪಕ್ಷಗಳು ನಮ್ಮನ್ನು ಪ್ರಶ್ನೆ ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದಾರೆ. ಈಗಲೇ ಮುಂದಿನ ಜನ್ಮದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕುರುಬ ಸ್ವಾಮೀಜಿಗಳೇ ಸಿದ್ದರಾಮಯ್ಯ ವರ್ತನೆಗೆ ಶಾಕ್ ಆಗಿದ್ದಾರೆ ಎಂದರು.ಗುರುವಾರ (ಇಂದು) ಜೆಪಿಸಿ ಚೇರ್ಮನ್ ವಿಜಯಪುರಕ್ಕೆ ಆಗಮಿಸುತ್ತಿದ್ದು, ಮಾಹಿತಿ ನೀಡಲು ತಯಾರಿ ಮಾಡಿಕೊಂಡಿದ್ದೇವೆ. ಇದು ಬಿಲ್ ಪಾಸ್ ಮಾಡಲು ಅನುಕೂಲವಾಗಲಿದೆ. ದೆಹಲಿಯೇ ವಿಜಯಪುರಕ್ಕೆ ಬರುತ್ತಿರುವುದು ಹೆಮ್ಮೆಯ ವಿಚಾರ. ಇಲ್ಲವಾದರೆ ನಾವು ದೆಹಲಿಗೆ ಓಡಾಡಬೇಕಿತ್ತು ಎಂದರು.