ಸಾರಾಂಶ
2019ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರೇ 2024ರಲ್ಲಿ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ. ಈ ಫಲಿತಾಂಶದೊಂದಿಗೆ ಎಚ್.ಡಿ.ಕುಮಾರಸ್ವಾಮಿ ಹಣೆಬರಹದೊಂದಿಗೆ ಜೆಡಿಎಸ್ ಭವಿಷ್ಯವೂ ನಿರ್ಧಾರವಾಗಲಿದೆ.
ಮಂಡ್ಯ : ಬಹು ನಿರೀಕ್ಷಿತ ಲೋಕಸಭಾ ಚುನಾವಣಾ ಫಲಿತಾಂಶ ಮಂಗಳವಾರ (ಜೂ.4) ಪ್ರಕಟಗೊಳ್ಳಲಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದೆ. ಅದೇ ರೀತಿ ಫಲಿತಾಂಶ ಏನಾಗಬಹುದೆಂಬ ಬಗ್ಗೆ ಜನರಲ್ಲಿ ತೀವ್ರ ಕುತೂಹಲವನ್ನೂ ಕಾಯ್ದುಕೊಂಡಿದೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರೇ ೨೦೨೪ರಲ್ಲಿ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ. ಈ ಫಲಿತಾಂಶದೊಂದಿಗೆ ಎಚ್.ಡಿ.ಕುಮಾರಸ್ವಾಮಿ ಹಣೆಬರಹದೊಂದಿಗೆ ಜಿಲ್ಲೆಯೊಳಗೆ ಜೆಡಿಎಸ್ ಭವಿಷ್ಯವೂ ಅಂತಿಮವಾಗಿ ನಿರ್ಧಾರವಾಗಲಿದೆ.
ಮತ ಎಣಿಕೆ ಸ್ಥಳಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುವುದರಿಂದ ಮಂಡ್ಯ ವಿವಿ ಆವರಣದೊಳಗೆ ಮರದ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರತಿ ಸುತ್ತುಗಳ ಫಲಿತಾಂಶದ ವಿವರವನ್ನು ಧ್ವನಿವರ್ಧಕದ ಮುಖಾಂತರ ಘೋಷಿಸಲಾಗುತ್ತದೆ.
112 ಟೇಬಲ್‌ಗಳಲ್ಲಿ ಮತ ಎಣಿಕೆ:
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಕೊಠಡಿಗಳಂತೆ ಒಟ್ಟು 16 ಕೊಠಡಿಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್‌ಗಳಂತೆ 112 ಟೇಬಲ್‌ಗಳಲ್ಲಿ ಇವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ. ಒಂದು ರೌಂಡ್‌ಗೆ 14 ಇವಿಎಂ ಯಂತ್ರಗಳನ್ನು ಮತ ಎಣಿಕೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ನೆಲಮಹಡಿಯ ಎರಡು 102 ಮತ್ತು 107 ಕೊಠಡಿಗಳಲ್ಲಿ ಅಂಚೆ ಮತಪತ್ರ ಮತ್ತು ಇಟಿಪಿಬಿಎಸ್ ಮತಪತ್ರಗಳ ಮತ ಎಣಿಕೆ 11 ಟೇಬಲ್‌ಗಳಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿ ಒಟ್ಟು 7465 ಮಂದಿ ಅಂಚೆ ಮತ್ತು ಇಟಿಪಿಬಿಎಸ್ ಮತಗಳು ಚಲಾವಣೆಗೊಂಡಿವೆ. ಇವುಗಳಲ್ಲಿ ಒಂದು ಟೇಬಲ್‌ಗೆ 650 ರಿಂದ 680 ಮತ ಪತ್ರಗಳನ್ನು ನೀಡಲಾಗುವುದು. ಜೂ4ರಂದು ಬೆಳಗ್ಗೆ 6.30ಕ್ಕೆ ಮೊದಲು ಅಂಚೆ ಮತಪತ್ರದ ಕೊಠಡಿ ತೆರೆದು ಎಣಿಕೆ ಮಾಡಲಾಗುವುದು. ನಂತರ ಇತರೆ ಕೊಠಡಿಗಳನ್ನು ತೆರೆದು ೮ ಗಂಟೆಯಿಂದ ಇವಿಎಂ ಯಂತ್ರದ ಮತಗಳನ್ನು ಎಣಿಕೆ ಪರಿಗಣಿಸಲಾಗುವುದು.
ಪ್ರತಿ ಕೊಠಡಿಗೂ ಇಂಟರ್‌ನೆಟ್:
ಎಂಟು ವಿಧಾನಸಭಾ ಕ್ಷೇತ್ರದ ಕೊಠಡಿಗಳಿಗೆ ತಲಾ ಒಬ್ಬರಂತೆ ಜಿಲ್ಲಾ ಸಮಾಲೋಚಕರು, ತಾಲೂಕು ಕಚೇರಿಯ ಐಟಿ ಸಮಾಲೋಕರು, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಲಾಗಿದೆ. ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಬಿಎಸ್‌ಎನ್‌ಎಲ್ ಹಾಗೂ ಜಿಯೋ ಕಂಪೆನಿಯ ಇಂಟರ್‌ನೆಟ್ ಸೌಲಭ್ಯ, ಮೂರು ಕಂಪ್ಯೂಟರ್ ಮತ್ತು ಒಂದು ಪ್ರಿಂಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ನಿರಂತರ ಸಮರ್ಪಕ ವಿದ್ಯುತ್ ಸಂಪರ್ಕ ಹಾಗೂ123 ವೆಬ್ ಕ್ಯಾಸ್ಟಿಂಗ್ ಕ್ಯಾಮೆರಾ ಸೇರಿದಂತೆ ಒಂದೊಂದು ಕೊಠಡಿಗೂ 360 ಡಿಗ್ರಿ ತಿರುಗುವ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ನಿಷೇಧಾಜ್ಞೆ ಜಾರಿ:
ಮತ ಎಣಿಕೆ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಸುವ ಸಲುವಾಗಿ ಮಂಗಳವಾರ (ಜೂ.೪) ಬೆಳಗ್ಗೆ 6 ರಿಂದ ಜೂ.5 ರ ಬೆಳಗ್ಗೆ 6 ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ. ಅಲ್ಲದೇ, ಮತ ಎಣಿಕೆ ಕೇಂದ್ರದ 100ಮೀ. ಅಂತರದಲ್ಲಿ ಎಲ್ಲ ರೀತಿಯ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮೊಬೈಲ್, ಕಾರ್ಡ್‌ಲೇಸ್ ಫೋನ್, ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ.
ಮತ ಎಣಿಕೆ ಸುತ್ತ ಬಂದೋಬಸ್ತ್:
ಮತ ಎಣಿಕೆ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.