ಸಾರಾಂಶ
ವಿಧಾನಸಭೆ ಚುನಾವಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠ ರಾಹುಲ್ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸಭೆ ಚುನಾವಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.
ಇದೇ ವೇಳೆ ಸಮನ್ಸ್ ಜಾರಿ ಮಾಡಲಾಗಿದ್ದು, ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮಾ.28ಕ್ಕೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.
ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಎಸ್.ಕೇಶವಪ್ರಸಾದ್ ದೂರು ಸಲ್ಲಿಸಿದ್ದು, ವಕೀಲ ವಿನೋದ್ ಕುಮಾರ್ ವಾದ ಮಂಡಿಸಿದ್ದರು.
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ಸೇರಿದಂತೆ ಇತರೆ ಆರೋಪಗಳನ್ನು ಮಾಡಿತ್ತು. ಅಲ್ಲದೇ, ಭ್ರಷ್ಟಾಚಾರ ರೇಟ್‌ಕಾರ್ಡ್ ಜಾಹೀರಾತು ನೀಡಿತ್ತು.
ಈ ಜಾಹೀರಾತಿನಿಂದ ಬಿಜೆಪಿಗೆ ಹಾನಿಯಾಗಿದೆ ಎಂದು ಆರೋಪಿಸಿ ಬಿಜೆಪಿ ದೂರು ನೀಡಿತ್ತು. ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದ ನ್ಯಾಯಾಲಯ ಮಾ.28ಕ್ಕೆ ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಆದೇಶಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ ಅತ್ಯಂತ ಪ್ರಮುಖ ಅಭಿಯಾನಗಳಲ್ಲಿ 40 ಪರ್ಸೆಂಟ್ ಒಂದಾಗಿತ್ತು.
ಆರಂಭದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಇದನ್ನು ಉಲ್ಲೇಖಿಸುತ್ತಿದ್ದ ಕಾಂಗ್ರೆಸ್ ನಾಯಕರು ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದರು. ಬಳಿಕ ಬೀದಿಗಳಲ್ಲಿ ಪೋಸ್ಟರ್ ಅಂಟಿಸಿ ಸಾಕಷ್ಟು ಸದ್ದು ಮಾಡಿದ್ದರು.
ಧ್ವನಿ ಸುರುಳಿಗಳು, ಜಾಹೀರಾತು ದೃಶ್ಯಾವಳಿಗಳು ಹೀಗೆ ಹಲವೆಡೆಯೂ 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಲಾಗಿತ್ತು.
ಬಳಿಕ ಚುನಾವಣೆ ಸಂದರ್ಭದಲ್ಲಿಯೂ ನಾಯಕರು ತಮ್ಮ ಪ್ರತಿ ಭಾಷಣದಲ್ಲಿಯೂ ಈ ಬಗ್ಗೆ ಉಲ್ಲೇಖಿಸಿದ್ದರು. ಈ ಸಂಬಂಧ ಬಿಜೆಪಿ ನ್ಯಾಯಾಲಯಕ್ಕೆ ದೂರು ನೀಡಿತ್ತು.