ಸಾರಾಂಶ
ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ದಾಖಲಾಗಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಬಹುಮುಖ್ಯ ವಾದ 'ಅಸಲಿ ವಿಡಿಯೋ ಇದೀಗ ಸಿಐಡಿಗೆ ಲಭ್ಯವಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ದಾಖಲಾಗಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಬಹುಮುಖ್ಯ ವಾದ 'ಅಸಲಿ ವಿಡಿಯೋ ಇದೀಗ ಸಿಐಡಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಸಿ.ಟಿ.ರವಿ ಅವರು ಏಳು ಬಾರಿ ಹೆಬ್ಬಾಳ್ಕರ್ ಅವರಿಗೆ ನಿಂದಿಸಿರುವುದು ಕೇಳಿಬರುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ರವಿ ನಿಂದನೆ ಕುರಿತು ಖಾಸಗಿ ವಾಹಿನಿಗಳಲ್ಲಿ ವಿಡಿಯೋ ದಾಖಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಆದರೆ ಅದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಭಾಪತಿ ಹೇಳುತ್ತಿದ್ದರು. ಆದರೆ ಸದನದಲ್ಲಿನ ಸರ್ಕಾರಿ ಟೀವಿಯಲ್ಲಿನ ವಿಡಿಯೋವೇ ಇದೀಗ ಸಿಕ್ಕಿದೆ. ಈ ವಿಡಿಯೋ ಸಿ.ಟಿ.ರವಿ ಅವರಿಗೆ ಕಂಟಕವಾಗಬಹುದಾದ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಅವರು ಧ್ವನಿ ಪರೀಕ್ಷೆಗೊಳಪಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಈವರೆಗೆ ತಾನು ಸಚಿವೆಯನ್ನು ಉದ್ದೇಶಿಸಿ 'ಫ್ರಸ್ಟ್ರೇಟ್' ಎಂದು ಹೇಳಿದ್ದೇನೆಯೇ ಹೊರತು ನಿಂದಿಸಿಲ್ಲ ಎಂದು ವಾದಿಸಿದ್ದ ರವಿ ಅವರು, ತಾನು ನಿಂದಿಸಿದ್ದಕ್ಕೆ ಅಸಲಿ ವಿಡಿಯೋವೇ ಇಲ್ಲ ಎಂದು ಹೇಳಿದ್ದರು.
ಇನ್ನೊಂದೆಡೆ ರವಿ ಅವರು ನಿಂದಿಸಿದ ಕುರಿತು ಯಾವುದೇ ಆಡಿಯೋ ವಿಡಿಯೋ ಇಲ್ಲವೆಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ತಿಳಿಸಿದ್ದರು. ಈಗಅಸಲಿ ವಿಡಿಯೋಸಿಐಡಿಗೆ ಲಭ್ಯವಾಗಿರು ವುದು ಭಾರೀ ಕುತೂಹಲ ಕೆರಳಿಸಿದೆ.
ಬೆಳಗಾವಿ ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ನಡೆದಿದ್ದ ಘಟನಾವಳಿಗಳ ಕುರಿತು ವಿಡಿಯೋ-ಆಡಿಯೋದಾಖಲೆ ನೀಡುವಂತೆ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ (ಡಿಎಪಿಆರ್) ಸಿಐಡಿ ಮನವಿ ಮಾಡಿತ್ತು. ಈ ಕೋರಿಕೆಗೆ ಸಮ್ಮತಿಸಿದ ಡಿಎಪಿಆರ್, ಸಿಐಡಿಗೆ ಸದನದಲ್ಲಿ ನಿಂದನೆ ಕೃತ್ಯ ನಡೆದ ವೇಳೆ ಚಿತ್ರೀಕರಿಸಿದ್ದ 4 ಗಂಟೆ ವಿಡಿಯೋ ಸಲ್ಲಿಸಿದೆ. ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ ರವಾನಿಸಿದ್ದು, ಆ ವಿಡಿಯೋದಲ್ಲಿ ಕೇಳಿ ಬರುವ ದನಿ ರವಿ ಅವರದ್ದೇ, ಅಲ್ಲವೇ ಎಂದು ಖಚಿತಪಡಿಸಿ ಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಸಿಐಡಿ ಅಧಿಕಾರಿಗಳು ಧ್ವನಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
7 ಬಾರಿ ನಿಂದಿಸಿದ್ದ ರವಿ:
ಬೆಳಗಾವಿ ಅಧಿ ವೇಶನದ ವೇಳೆ ಡಿ.19 ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಂಸದೀಯ ಪದ ಬಳಸಿ ರವಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಿರೇಬಾಗೇವಾಡಿ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ, ಆ ದಿನ ನಡೆದಿದ್ದ ಘಟನಾವಳಿ ಕುರಿತ ವಿಡಿಯೋ ನೀಡುವಂತೆ ಡಿಎಪಿಆರ್‌ಗೆ ಪತ್ರ ಬರೆದಿತ್ತು. ಈ ಕೋರಿಕೆ ಹಿನ್ನೆಲೆಯಲ್ಲಿ ಸಿಐಡಿಗೆ ಡಿಎಪಿಆರ್ ಇಲಾಖೆ ವಿಡಿಯೋ ಸಲ್ಲಿಸಿದೆ. ಆ ವಿಡಿಯೋ ಪರಿಶೀಲಿಸಿದಾಗ ಏಳು ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಿಂದಿಸಿರುವುದು ಕೇಳಿ ಬರುತ್ತದೆ ಎಂದು ಸಿಐಡಿ ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ.
ಇಂದು ಧ್ವನಿ ಪರೀಕ್ಷೆ ಕುರಿತು ನಿರ್ಧಾರ?:
ಈ ವಿಡಿಯೋ ಆಧರಿಸಿ ರವಿ ಅವರ ಧ್ವನಿ ಪರೀಕ್ಷೆ ನಡೆಸಲು ಸಿಐಡಿ ಅಧಿಕಾರಿಗಳು ಮುಂದಾಗಿ ದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ಧ್ವನಿ ಪರೀಕ್ಷೆಗೊಳಪಡುವು ದಿಲ್ಲ ಎಂದು ರವಿ ಹೇಳಿದ್ದರು. ಆದರೆ ಇದೇ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡುವಾಗ ಸಿಐಡಿ ತನಿಖೆಗೆ ಸಹಕರಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ಹೀಗಾಗಿ ಧ್ವನಿ ಪರೀಕ್ಷೆಗೆ ನಿರಾಕರಣೆ ಹಿನ್ನೆಲೆಯಲ್ಲಿ ತನಿಖೆಗೆ ಅಸಹಕಾರ ತೋರಿದ್ದಾರೆಂದು ಆರೋಪಿಸಿ ರವಿ ವಿರುದ್ದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಿಐಡಿ ಮೊರೆ ಹೋಗಿದೆ. ಅಲ್ಲದೆ ಧ್ವನಿ ಪರೀಕ್ಷೆಗೆ ಸ್ಯಾಂಪಲ್ ನೀಡಲು ಅನುಮತಿ ಕೋರಿ ಸಹ ನ್ಯಾಯಾಲ ಯಕ್ಕೆ ಸಿಐಡಿ ಮನವಿ ಮಾಡಿದೆ. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ರವಿ ಅವರಿಗೆ ನೋಟಿಸ್ ನೀಡಿತ್ತು. ಈ ಸಂಬಂಧ ನ್ಯಾಯಾಲಯ ನೀಡುವ ಆದೇಶದ ಮೇರೆಗೆ ಮುಂದಿನ ತನಿಖೆ ತೀರ್ಮಾನವಾಗಲಿದೆ ಎನ್ನಲಾಗಿದೆ