ಸಾರಾಂಶ
ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರರು ಸಿದ್ಧತೆ ನಡೆಸಿದ್ದರಾ? ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೀಡಿರುವ ಹೇಳಿಕೆ ಇಂತದ್ದೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಚನ್ನಪಟ್ಟಣ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದರಾ?, ದರ್ಶನ್‌ರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರರು ಸಿದ್ಧತೆ ನಡೆಸಿದ್ದರಾ? ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೀಡಿರುವ ಹೇಳಿಕೆ ಇಂತದ್ದೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದು ಡಿ.ಕೆ.ಸುರೇಶ್ ಹೇಳಿದ್ದರು. ಆದರೆ, ಆ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚುನಾವಣೆಯಲ್ಲಿ ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ.ಸಹೋದರರು ಪ್ಲ್ಯಾನ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನೀವೇ ಊಹೆ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ದರ್ಶನ್‌ರನ್ನು ಕಣಕ್ಕಿಳಿಸಲು ಡಿ.ಕೆ.ಸಹೋದರರು ಚಿಂತನೆ ನಡೆಸಿದ್ದರು ಎಂದು ಬಾಂಬ್ ಸಿಡಿಸಿದರು.
ಮಾಜಿ ಸಂಸದರು ಅಚ್ಚರಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದುಕೊಂಡಿದ್ದರೋ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈಗ ಅವರು ಬೇರೆ ಅಚ್ಚರಿ ಅಭ್ಯರ್ಥಿಯನ್ನು ಹುಡುಕಬೇಕಿದೆ. ಅವರು ಅಚ್ಚರಿ ಅಭ್ಯರ್ಥಿಯನ್ನೇ ಹಾಕಲಿ, ಯಾರನ್ನೇ ಅಭ್ಯರ್ಥಿ ಮಾಡಲಿ, ನಮಗೆ ಚುನಾವಣೆ ನಡೆಸುವುದು ಗೊತ್ತಿದೆ ಎಂದರು.
ಬಿಜೆಪಿ ಅಭ್ಯರ್ಥಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಬಿಜೆಪಿಗೆ ಅಸ್ತಿತ್ವ ಇದೆ. ಇಲ್ಲಿ ಬಿಜೆಪಿಗೆ ಹೆಚ್ಚು ಬಲ ಇದೆ. ಕನಕಪುರ, ರಾಮನಗರ, ಮಾಗಡಿಯಲ್ಲಿ ಜೆಡಿಎಸ್ ಗೆ ಶಕ್ತಿ ಇದೆ. ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೋಣ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಟಿಕೆಟ್ ನೀಡುವಂತೆ ಪ್ರಸ್ತಾಪಿಸಿದರು.