ಸಾರಾಂಶ
ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿ ಬಾಯಿ ಬಂದ್ ಮಾಡಿಸಿದ ಬೆನ್ನಲ್ಲೇ ಸೋಮವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತ್ಯಾಗದ ಮಾತನಾಡಿದ್ದಾರೆ.
ಬೆಳಗಾವಿ : ಡಿನ್ನರ್ ಪಾಲಿಟಿಕ್ಸ್, ಸಿಎಂ ಹುದ್ದೆ ಒಪ್ಪಂದ, ದಲಿತ ಸಿಎಂ ಕೂಗು ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ಜಟಾಪಟಿ ಬಗ್ಗೆ ಬಹಿರಂಗ ಹೇಳಿಕೆಯ ಪೈಪೋಟಿಗಿಳಿದಿದ್ದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿ ಬಾಯಿ ಬಂದ್ ಮಾಡಿಸಿದ ಬೆನ್ನಲ್ಲೇ ಸೋಮವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತ್ಯಾಗದ ಮಾತನಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ಬಾರಿ ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.ನನಗೆ ಪಕ್ಷ ಮುಖ್ಯ. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತು.
ಮಾಧ್ಯಮದವರು ಯಾರ ಮಾತನ್ನೂ ಕೇಳಬೇಡಿ. ನಾನು ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳ್ಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು. ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ಬೇರೆ ಯಾವುದೇ ಕರ್ತವ್ಯಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ. ನನಗೆ ಯಾವುದೇ ಹುದ್ದೆಯ ಅವಶ್ಯಕತೆಯಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.