ಮೆಟ್ರೋ ನಿಲ್ದಾಣಗಳ 8 ಕಡೆ ಕೆಎಂಎಫ್‌ ಮಳಿಗೆಗೆ ಅವಕಾಶ: ಡಿಸಿಎಂ ಸೂಚನೆ

| Published : Jun 19 2025, 01:19 AM IST

ಸಾರಾಂಶ

ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ಬಿಎಂಆರ್‌ಸಿಎಲ್‌ಗೆ ಅರ್ಜಿ ಹಾಕಲು ಕೆಎಂಎಫ್‌ಗೆ ಸೂಚನೆ ನೀಡಿದ್ದು, 10 ಸ್ಥಳಗಳಲ್ಲಿ 8 ಕಡೆ ನಂದಿನಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ಬಿಎಂಆರ್‌ಸಿಎಲ್‌ಗೆ ಅರ್ಜಿ ಹಾಕಲು ಕೆಎಂಎಫ್‌ಗೆ ಸೂಚನೆ ನೀಡಿದ್ದು, 10 ಸ್ಥಳಗಳಲ್ಲಿ 8 ಕಡೆ ನಂದಿನಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕುಮಾರಪಾರ್ಕ್‌ ಸರ್ಕಾರಿ ನಿವಾಸದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳಿಗೆಗಳನ್ನು ಬಾಡಿಗೆ ನೀಡುವ ಸಲುವಾಗಿ ಬಿಎಂಆರ್‌ಸಿಎಲ್‌ ಜಾಗತಿಕ ಟೆಂಡರ್‌ ಪ್ರಕ್ರಿಯೆ ನಡೆಸಿದ್ದು, ಅದರಲ್ಲಿ ಅಮೂಲ್‌ ಸಂಸ್ಥೆ ಹೊರತಾಗಿ ಬೇರೆ ಯಾರೂ ಅರ್ಜಿ ಸಲ್ಲಿಸಿಲ್ಲ. ಕೆಎಂಎಫ್‌ ಟೆಂಡರ್‌ನಲ್ಲಿ ಪಾಲ್ಗೊಂಡಿಲ್ಲ. ಈಗ ಅರ್ಜಿ ಸಲ್ಲಿಸುವಂತೆ ಕೆಎಂಎಫ್‌ಗೆ ಸೂಚಿಸಲಾಗಿದೆ. ಉಳಿದಂತೆ ಟೆಂಡರ್‌ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ ಅಮೂಲ್‌ ಅವರು ಬಿಡ್‌ ಸಲ್ಲಿಸಿ ಮಳಿಗೆ ತೆರೆದಿದ್ದಾರೆ. ಈಗಾಗಲೇ ಆರಂಭಿಸಲಾಗಿರುವ ಮಳಿಗೆ ಮುಚ್ಚುವುದು ಸರಿಯಲ್ಲ. ಹೀಗಾಗಿ ಬಿಡ್‌ ಸಲ್ಲಿಕೆಯಾಗದ 8 ಸ್ಥಳಗಳಲ್ಲಿ ಕೆಎಂಎಫ್‌ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವಂತೆ ತಿಳಿಸಿದ್ದೇನೆ ಎಂದರು.

ಅಮುಲ್‌ ಜತೆ ಒಪ್ಪಂದ ರದ್ದು ಕಷ್ಟ: ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೂಡ ಮಳಿಗೆ ತೆರೆಯಲು ಆಸಕ್ತಿ ತೋರಿದ್ದು ಅವಕಾಶ ಕೊಡಲಾಗುವುದು. ಆದರೆ, ಈಗಾಗಲೇ ಕಿಯೋಸ್ಕ್‌ ಸೆಂಟರ್‌ ತೆರೆಯಲು ಗುಜರಾತ್‌ ಕೋ-ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಷನ್‌ ಜೊತೆಗೆ ಒಪ್ಪಂದ ಆಗಿದ್ದಲ್ಲಿ ಅದನ್ನು ರದ್ದುಮಾಡುವುದು ಕಷ್ಟ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್‌ ಎಂ. ಹೇಳಿದ್ದಾರೆ.

ನಮ್ಮ ಮೆಟ್ರೋದ ಪ್ರಮುಖ 10 ನಿಲ್ದಾಣಗಳಲ್ಲಿ ಅಮುಲ್‌ ಕಿಯೋಸ್ಕ್‌ ಮಳಿಗೆ ತೆರೆಯಲು ಗುಜರಾತ್‌ ಕೋ-ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಷನ್‌ ಲಿ. ಜೊತೆಗೆ ಒಪ್ಪಂದ ಆಗಿದೆ. ಅವರು ಎರಡು ಮೂರು ಕಡೆ ಮಳಿಗೆ ಆರಂಭಿಸಿದ್ದಾರೆ. ಒಂದು ಬಾರಿ ಒಪ್ಪಂದ ಆದರೆ ಮುಂದುವರಿಸಬೇಕಾಗುತ್ತದೆ. ಬಾಕಿ ಜಾಗದಲ್ಲಿ ಪರಿಶೀಲನೆ ಮಾಡಲಾಗುವುದು. ಸರ್ಕಾರ ನೀಡುವ ನಿರ್ದೇಶನದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇನ್ನು, ಕೆಎಂಎಫ್‌ ನಂದಿನಿ ಕೂಡ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಆಸಕ್ತಿ ತೋರಿದೆ. ಬಿಎಂಆರ್‌ಸಿಎಲ್‌ ಬಾಡಿಗೆ ಆಧಾರದಲ್ಲಿ ಜಾಗವನ್ನು ಕೊಡುತ್ತದೆ. ಅವರು ಬಂದರೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಜಾಲತಾಣದಲ್ಲಿ ಅಸಮಾಧಾನ:

ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆ ಆರಂಭ ಆಗಿರುವುದಕ್ಕೆ ಕನ್ನಡಿಗರ ವಿರೋಧ ಮುಂದುವರಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಎಂಆರ್‌ಸಿಎಲ್‌, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ‘ಎಕ್ಸ್‌’ ಸೇರಿ ಇತರೆ ಸಾಮಾಜಿಕ ಜಾಲತಾಣದಲ್ಲಿ ‘ನಂದಿನಿ ಬೇಕು, ಅಮುಲ್ ಬೇಡ (We want Nandini booth not amul) ಎಂದು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಸೇವ್ ನಂದಿನಿ ಅಭಿಯಾನ ಇದೆನಾ? ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಹೋರಾಟ ಮಾಡಿದ ಕಾಂಗ್ರೆಸ್ ಈಗ ಸುಮ್ಮನಿರೋದು ಯಾಕೆ? ನಮ್ಮದೇ ಕೆಎಂಎಫ್ ನಂದಿನಿ ಇರುವಾಗ ಅಮುಲ್‌ಗೆ ಯಾಕೆ ಅವಕಾಶ ಯಾಕೆ ? ಎಂದು ಪ್ರಶ್ನಿಸಿದ್ದಾರೆ.