ದೇಶದ್ರೋಹದ ಘೋಷಣೆ ಸಹಿಸುವುದಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Mar 01 2024, 02:18 AM IST / Updated: Mar 01 2024, 08:12 AM IST

N. Chaluvarayaswamy

ಸಾರಾಂಶ

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ: ಇದು ರಾಜಕೀಯ ಬೆರೆಸುವ ವಿಚಾರವಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರಿಗೆ ಕ್ರಮ ಬೇಕಿಲ್ಲ. ವಿಷಯ ಬೇಕಷ್ಟೇ. ಮುಂದೆ ಲೋಕಸಭೆ ಚುನಾವಣೆ ಇರುವುದರಿಂದ ಇದನ್ನೇ ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದಾರೆ. ಇದನ್ನು ಮೊದಲು ಬಿಡಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಯಾವುದೇ ಪಕ್ಷವಿರಲಿ, ವ್ಯಕ್ತಿ ಇರಲಿ ದೇಶ, ನೆಲ, ಜಲ, ಭಾಷೆ ವಿಚಾರ ಬಂದಾಗ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರೇ ಹೇಳಿದರೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದಲ್ಲಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ರಾಜಕೀಯ ಬೆರೆಸುವ ವಿಚಾರವಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರಿಗೆ ಕ್ರಮ ಬೇಕಿಲ್ಲ. ವಿಷಯ ಬೇಕಷ್ಟೇ. 

ಮುಂದೆ ಲೋಕಸಭೆ ಚುನಾವಣೆ ಇರುವುದರಿಂದ ಇದನ್ನೇ ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದಾರೆ. ಇದನ್ನು ಮೊದಲು ಬಿಡಬೇಕು. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ. ಸಮಸ್ಯೆಗಳಿರುವ ಗ್ರಾಮಗಳಿಗೆ ಬೋರ್‌ವೆಲ್ ಮತ್ತು ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ. 

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪರಿಸ್ಥಿತಿ ನಿಭಾಯಿಸಸುವ ಕೆಲಸ ಮಾಡುತ್ತದೆ ಎಂದರು.

ಲೋಕಸಭೆ ಚುನಾವಣೆಗೆ ಹೊಸ ಮುಖವಾಗಿ ಸ್ಟಾರ್ ಚಂದ್ರು ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಕೇಳಿದಾಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೊಸ ಮುಖವೇ. ಅವರು ನನಗೂ ಪರಿಚಯವಿರಲಿಲ್ಲ. 

ಅವರು ಚುನಾವಣೆಯಲ್ಲಿ ಗೆಲ್ಲಲಿಲ್ಲವೇ. ಸ್ಟಾರ್ ಚಂದ್ರು ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಅಣ್ಣ ಗೌರಿಬಿದನೂರಿನಲ್ಲಿ ಶಾಸಕರಾಗಿ ನಮ್ಮ ಜೊತೆ ಇದ್ದಾರೆ. 

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಅವರಿಗೆ ಟಿಕೆಟ್ ಕೊಡಬೇಕಿತ್ತು. ಆದರೆ, ಪಕ್ಷದಲ್ಲಿ ಹಿರಿಯ ನಾಯಕರು ಇದ್ದ ಕಾರಣ ಟಿಕೆಟ್ ಕೈತಪ್ಪಿತ್ತು. ಆದರೂ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರೂ ನಮ್ಮ ಜೊತೆ ಇದ್ದಾರೆ. ನಮ್ಮ ಪಕ್ಷಕ್ಕೆ ಅವರ ಕುಟುಂಬ ಬೆಂಬಲವಾಗಿ ನಿಂತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.