ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆಗೆ ಒತ್ತಾಯ

| Published : Jul 11 2024, 01:36 AM IST / Updated: Jul 11 2024, 04:22 AM IST

ಸಾರಾಂಶ

ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ, ಕೋಮವಾದವನ್ನು ಪ್ರತಿಪಾದಿಸುವ ಎನ್.ಇ.ಪಿ- 2020 ಗೆ ಸಿಪಿಎಂ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಜುಲೈ 1ರಿಂದ ಜಾರಿಗೆ ತಂದಿರುವ ಪ್ರಜಾಪ್ರಭುತ್ವ ವಿರೋಧಿ ಕ್ರಿಮಿನಲ್ ಕಾನೂನನ್ನು ಕೇಂದ್ರ ವಾಪಸ್ ಪಡೆಯಬೇಕು

 ಬಾಗೇಪಲ್ಲಿ  ; ನೀಟ್ ಪರೀಕ್ಷಾ ಪದ್ದತಿ ವಾಪಸ್ ಪಡೆಯುವಂತೆ ಹಾಗೂ ನೀಟ್ ಹಗರಣದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಮಂಗಳವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುಂದರಯ್ಯ ಭವನದ ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಶಿಕ್ಷಣ ಕ್ಷೇತ್ರದ ದೊಡ್ಡ ಹಗರಣ

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ನೀಟ್ ಪರೀಕ್ಷೆಯಲ್ಲಿ ಹಗರಣ ನಡೆದ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ನುಚ್ಚುನೂರಾಗಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿಯೇ ಅತೀ ದೊಡ್ಡ ಹಗರಣವಾಗಿದ್ದು ಇದರ ನೇರ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ, ಕೋಮವಾದವನ್ನು ಪ್ರತಿಪಾದಿಸುವ ಎನ್.ಇ.ಪಿ- 2020 ಗೆ ಸಿಪಿಎಂ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಜುಲೈ 1ರಿಂದ ಜಾರಿಗೆ ತಂದಿರುವ ಪ್ರಜಾಪ್ರಭುತ್ವ ವಿರೋಧಿ ಕ್ರಿಮಿನಲ್ ಕಾನೂನನ್ನು ವಾಪಸ್ ಪಡೆಯಬೇಕು, ನೀಟ್ ಪರೀಕ್ಷೆ ರದ್ದುಗೊಳಿಸಬೇಕು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಮತಾಂಧರ ದಾಳಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮುನಿವೆಂಕಟಪ್ಪ, ಕೃಷ್ಣಪ್ಪ, ಅಶ್ವಥಪ್ಪ, ಚೆನ್ನರಾಯಪ್ಪ, ನರಸಿಂಹರೆಡ್ಡಿ, ಸೋಮಶೇಖರ್, ರಾಮಲಿಂಗಪ್ಪ, ಅಂಜಿನಪ್ಪ, ಸಾವಿತ್ರಮ್ಮ, ನಾಗಪ್ಪ ಶ್ರೀನಿವಾಸ್, ನಾಗರಾಜ್ ಮತ್ತಿತರರು ಇದ್ದರು.