ಸಾರಾಂಶ
ಮುಡಾ ಹಗರಣದಿಂದ ಪಾರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಸಾಯಿ ಆಯೋಗ ರಚನೆ ಮಾಡಿದ್ದು, ಆಯೋಗದ ವರದಿ ತಗೊಂಡು ನೆಕ್ಕಲು ಆಗುತ್ತಾ ಎಂದು ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು
ಮೈಸೂರು : ಮುಡಾ ಹಗರಣದಿಂದ ಪಾರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಸಾಯಿ ಆಯೋಗ ರಚನೆ ಮಾಡಿದ್ದು, ಆಯೋಗದ ವರದಿ ತಗೊಂಡು ನೆಕ್ಕಲು ಆಗುತ್ತಾ ಎಂದು ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಗರಣದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಬೇಕೆ ಹೊರತು, ರಾಜೀನಾಮೆ ಕೊಡಿ ಎಂದಾಕ್ಷಣಾ ಮುಖ್ಯಮಂತ್ರಿ ಕೊಟ್ಟು ಬಿಡುತ್ತಾರೆಯೇ? ಅಲ್ಲದೇ ಮುಡಾ ಹಗರಣದಿಂದ ಪಾರಾಗಿ ಅಧಿಕಾರದಲ್ಲಿ ಉಳಿದುಕೊಳ್ಳಲು ಸಿದ್ದರಾಮಯ್ಯ ಅವರೇ ದೇಸಾಯಿ ಆಯೋಗ ರಚಿಸಿದ್ದಾರೆ. ನಮ್ಮಲ್ಲಿರುವ ದಾಖಲೆಗಳನ್ನು ಆಯೋಗಕ್ಕೆ ನೀಡಿ ಮಣ್ಣು ಹಾಕಿಕೊಳ್ಳಬೇಕಾ? ಆಯೋಗದಿಂದ ನ್ಯಾಯ ಸಿಗುವುದಿಲ್ಲ. ಸಿದ್ದರಾಮಯ್ಯ ಪತ್ನಿ 50 ಅಲ್ಲ 100 ನಿವೇಶನ ಬೇಕಾದರೂ ಪಡೆದುಕೊಳ್ಳಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸಿದ್ದರಾಮಯ್ಯ ಪತ್ನಿಗೆ ಕಾನೂನುಬಾಹಿರವಾಗಿ ನಿವೇಶನ ನೀಡಲಾಗಿದ್ದು, ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಮುಡಾ ವಿಚಾರವಾಗಿ ನಾವು ಯಾವುದೇ ಚಿತಾವಣೆ ಮಾಡುತ್ತಿಲ್ಲ. ನಿಮ್ಮ ಕುರ್ಚಿಯ ಮೇಲೆ ನಿಮ್ಮ ಪಕ್ಷದವರೇ ಟವೆಲ್ ಹಾಕಿಕೊಂಡಿದ್ದು, ಅವರೇ ಇದನ್ನೆಲ್ಲ ಮಾಡಿಸುತ್ತಿದ್ದಾರೆ. ನೀವು ಹುಷಾರಾಗಿರಿ. ಮೊದಲು ಅವರನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ನನಗೆ ಈವರೆಗೂ ಮುಡಾ ಸೈಟ್ ಕೊಟ್ಟಿಲ್ಲ-ಎಚ್ಡಿಕೆ
ಮುಡಾದಿಂದ ನಾನು ಯಾವುದೇ ನಿವೇಶನ ಪಡೆದಿಲ್ಲ. 1984ರಲ್ಲಿ ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿ 37ಸಾವಿರ ಹಣವನ್ನೂ ಕಟ್ಟಿದ್ದೇನೆ. ಆದರೆ, ಇದುವರೆಗೂ ನಿವೇಶನ ಕೊಟ್ಟಿಲ್ಲ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ ಕಾಂಗ್ರೆಸ್‌ನವರು ಅದನ್ನೇ ದೊಡ್ಡದು ಮಾಡುತ್ತಿದ್ದರು. ಆದರೂ ನನ್ನ ವಿರುದ್ಧ ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.