ಸೋತರೂ ಮತಗಳಿಕೆಯಲ್ಲಿ ಕಾಂಗ್ರೆಸ್‌ ಮುಂದು

| Published : Jun 09 2024, 01:35 AM IST / Updated: Jun 09 2024, 03:57 AM IST

ಸಾರಾಂಶ

ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ನಾವು ಸೋತರೂ ಐದು ವರ್ಷಗಳ ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇಕಡಾವಾರು ಹೆಚ್ಚಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮತ ಈ ಬಾರಿ ಬಂದಿದೆ.

 ಚಿಕ್ಕಬಳ್ಳಾಪುರ :  ಜೆಡಿಎಸ್ ಮೈತ್ರಿ ಬಿಜೆಪಿಗೆ ಲಾಭ ತಂದಿದೆ. ಆದರೆ ಮತಗಳಿಕೆಯಲ್ಲಿ ನಾವೇ ಮುಂದಿದ್ದೇವೆ. ನಮ್ಮ ಅಭ್ಯರ್ಥಿ ಸೋತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಾವಿರುತ್ತೇವೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಸೋತು ಎನ್ ಡಿ ಎ ಅಭ್ಯರ್ಥಿ ಡಾ ಕೆ.ಸುಧಾಕರ್ ಗೆದ್ದಿದ್ದಾರೆ. ಸೋತಿದ್ದಕ್ಕೆ ಕಾರ್ಯಕರ್ತರು ಧೃತಿಗೆಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.

ಬಿಜೆಪಿಗೆ ಇಂಡಿಯಾ ಕೂಟ ಬ್ರೇಕ್‌

ಕ್ಷೇತ್ರದಲ್ಲಿ ಜಯಗಳಿಸಿರುವ ಡಾ.ಕೆ‌.ಸುಧಾಕರ್ ಜನರ ನಿರೀಕ್ಷೆಯಂತೆ ಕೆಲಸ ಮಾಡಲಿ, ಅವರಿಗೆ ಶುಭ ಕೋರೋಣ. ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ನಾವು ಸೋತರೂ ಐದು ವರ್ಷಗಳ ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇಕಡಾವಾರು ಹೆಚ್ಚಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮತ ಈ ಬಾರಿ ಬಂದಿದೆ. ದೇಶದಲ್ಲಿ ನರೇಂದ್ರ ಮೋದಿ ನಾಗಾಲೋಟಕ್ಕೆ ಇಂಡಿಯಾ ಕೂಟವು ಬ್ರೇಕ್ ಹಾಕಿದೆ. 

ಅವರು ನಿರೀಕ್ಷಿಸಿದ್ದ ನಾನೂರು ಸೀಟು ಗೆಲ್ಲಲಾಗಿಲ್ಲ ಮಿತ್ರ ಪಕ್ಷಗಳು ಸೇರಿಕೊಂಡಂತೆ 292 ಸೀಟುಗಳು ಮಾತ್ರವೇ ಸಿಕ್ಕಿದೆ ಇದು ಎಚ್ಚರಿಕೆಯ ಗಂಟೆಯಾಗಿದೆ. ನಿಮ್ಮ ಕುರ್ಚಿ ಶಾಶ್ವತವಲ್ಲ ಎಂದು ಮೈತ್ರಿ ಪಕ್ಷಕ್ಕೆ ಎಚ್ಚರಿಕೆ ನೀಡಿದರು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರನ ತೀರ್ಪಿಗೆ ತಲೆಬಾಗುತ್ತೇವೆ. ಮುಂದೆ ಬರೋ ಸ್ಥಳೀಯ ಚುನಾವಣೆಗಳು ಬಹಳಷ್ಟು ಬದಲಾಗಲಿದೆ.

 ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.ಸೋಲಿನ ಕಾರಣ ಪರಾಮರ್ಶೆಪರಾಜಿತ ಅಭ್ಯರ್ಥಿ ಎಂ.ಎಸ್. ರಕ್ಷಾರಾಮಯ್ಯರ ತಂದೆ ಹಾಗೂ ವಿಧಾನಪರಿಷತ್ತಿನ ಸದಸ್ಯ ಎಂ.ಆರ್.ಸೀತಾರಾಮ್ ಮಾತನಾಡಿ, ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲಾಗಿತ್ತು. ಸಂಘಟನೆಯೂ ಉತ್ತಮವಾಗಿಯೇ ನಡೆದಿತ್ತು ಆದರೆ ನಮ್ಮ ಸೋಲಿಗೆ ಎಲ್ಲಿ ಏನು ಕಾರಣವಾಗಿದೆ ಅನ್ನೊದನ್ನ ಪರಾಮರ್ಶೆ ಮಾಡುತಿದ್ದೇವೆ. 

ನಾವು ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ. ನಮ್ಮ ರಕ್ಷಾ ರಾಮಯ್ಯಗೆ ಮತನೀಡಿದ ಮತದಾರರಿಗೆ, ಮತ ಕೊಡಿಸಿದ ಕಾರ್ಯಕರ್ತರು ಮುಖಂಡರುಗಳಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು. ಪರಾಜಿತ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಮಾತನಾಡಿ, ಗೆದ್ದ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಶುಭಾಶಯ ಹೇಳುತ್ತೇನೆ. 

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 11 ಯುವಕರಿಗೆ ಆಧ್ಯತೆ ನೀಡಿತ್ತು. ಈ ಪೈಕಿ ನಾಲ್ವರು ಗೆಲುವು ಸಾಧಿಸಿದ್ದಾರೆ. ನಮ್ಮ ಜನಪರ ಕಾರ್ಯಕ್ರಮಗಳು ನಮ್ಮ ಕೈ ಹಿಡಿದಿದೆ. ಅಭಿವೃದ್ಧಿ ಯೋಜನೆಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದೇವೆ. ನನಗೆ ಮತನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು

ಸುಧಾಕರ್‌ ಕಣ್ಣೀರಿಗೆ ಮತಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಡಾ.ಕೆ.ಸುಧಾಕರ್ ಕಣ್ಣೀರಿಗೆ ಮಾರು ಹೋಗಿ ಜನ ಮತ ನೀಡಿದ್ದಾರೆ.ಒಂದು ವರ್ಷ ಅಜ್ಞಾತವಾಸದಿಂದ ಬಂದ ಸುಧಾಕರ್ ಗೆ ಕನಿಕರ ತೋರಿದ್ದಾರೆ.ಉತ್ತರ ಭಾರತದಲ್ಲಿ ನೋಡಿದ್ರೆ ಗೊತ್ತಾಗುತ್ತೆ. ಬಿಜೆಪಿ ಬಗ್ಗೆ ಜನರ ವಿರೋಧವಿದೆ. ಬಿಜೆಪಿಯ ಬಗ್ಗೆ ಜನರಿಗೆ ಒಲವಿಲ್ಲ. ಚುನಾವಣೆ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಧ್ವೇಷ ರಾಜಕೀಯ ಶುರುವಾಗಿದೆ. ಇದು ಬೇಡ. ಚುನಾವಣೆ ಮುಗಿದಿದೆ. ಜನರನ್ನು ರಾಜಕೀಯ ಧ್ವೇಶಗಳಿಗೆ ಬಲಿ ಕೊಡ ಬೇಡಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಅನುಸೂಯಮ್ಮ, ನಂದಿ ಎಂ.ಆಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಡಿವಿಆರ್ ರಾಜೇಶ್, ನಗರಸಭಾ ಸದಸ್ಯ ಎಸ್.ಎಂ. ರಫೀಕ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ,ಲೇಬರ್ ಸೆಲ್ ಜಿಲ್ಲಾಧ್ಯಕ್ಷ ಪೆದ್ದಣ್ಣ, ಮತ್ತಿತರರು ಇದ್ದರು.ಸಿಕೆಬಿ-5 ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.