ನಾಳೆ ದಿಲ್ಲಿಯಲ್ಲಿ ಡಿಕೆಶಿ-ರಾಹುಲ್‌ ಗಾಂಧಿ ಭೇಟಿ : ಪಕ್ಷದ ವಿದ್ಯಮಾನದ ಬಗ್ಗೆಯೂ ಚರ್ಚೆ?

| N/A | Published : Feb 24 2025, 11:13 AM IST

rahul gandhi

ಸಾರಾಂಶ

ರಾಜ್ಯದಲ್ಲಿ ಬಣ ರಾಜಕೀಯ ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 100 ಕಾಂಗ್ರೆಸ್‌ ಕಚೇರಿಗಳ ನಿರ್ಮಾಣ ಕಾರ್ಯದ ಶಂಕುಸ್ಥಾಪನೆಗೆ ಪಕ್ಷದ ವರಿಷ್ಠರನ್ನು ಆಹ್ವಾನಿಸಲು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ

 ಬೆಂಗಳೂರು : ರಾಜ್ಯದಲ್ಲಿ ಬಣ ರಾಜಕೀಯ ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 100 ಕಾಂಗ್ರೆಸ್‌ ಕಚೇರಿಗಳ ನಿರ್ಮಾಣ ಕಾರ್ಯದ ಶಂಕುಸ್ಥಾಪನೆಗೆ ಪಕ್ಷದ ವರಿಷ್ಠರನ್ನು ಆಹ್ವಾನಿಸಲು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ವೇಳೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠ ರಾಹುಲ್‌ಗಾಂಧಿ ಭೇಟಿಯಾಗಲಿದ್ದಾರೆ.

ಈ ಭೇಟಿ ವೇಳೆ ರಾಜ್ಯ ಕಾಂಗ್ರೆಸ್‌ನಲ್ಲಿನ ವಿದ್ಯಮಾನಗಳ ಬಗ್ಗೆ ವರಿಷ್ಠರಿಗೆ ಸಂಪೂರ್ಣ ವಿವರಣೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಅವರ ದೆಹಲಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ 100 ವರ್ಷ ಪೂರೈಸಿದ ನೆನಪಿಗಾಗಿ ರಾಜ್ಯಾದ್ಯಂತ 100 ಕಾಂಗ್ರೆಸ್‌ ಕಚೇರಿಗಳನ್ನು ನಿರ್ಮಿಸಲು ಕೆಪಿಸಿಸಿ ಮುಂದಾಗಿದೆ. ಈಗಾಗಲೇ 104 ಕಡೆಗಳಿಂದ ಅರ್ಜಿ ಬಂದಿದ್ದು, ಸಮಿತಿಯ ಮಾನದಂಡದ ಪ್ರಕಾರ 72 ಅಗತ್ಯ ನಿವೇಶನಗಳೊಂದಿಗೆ ಶಂಕುಸ್ಥಾಪನೆಗೆ ಸಿದ್ಧವಾಗಿವೆ. ಕಾಂಗ್ರೆಸ್ ಹೆಸರಿನಲ್ಲಿ ನೋಂದಣಿ ಆಗಿರುವ ಸ್ಥಳಗಳಲ್ಲಿ ಮಾತ್ರ ಕಚೇರಿ ನಿರ್ಮಾಣ ಮಾಡಲಿದ್ದು, ವಾರದೊಳಗೆ 100 ಸ್ಥಳಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಮಾ.9 ಅಥವಾ 10 ರಂದು ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆ ಬಳಿ ಹೊಸ ಕಚೇರಿ ಸ್ಥಾಪನೆಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಶಂಕುಸ್ಥಾಪನೆ ನೆರವೇರಿಸಲು ತೀರ್ಮಾನಿಸಲಾಗಿದೆ. ತನ್ಮೂಲಕ 100 ಕಚೇರಿಗಳ ನಿರ್ಮಾಣಕ್ಕೂ ಏಕಕಾಲದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಆಹ್ವಾನಿಸಲು ಡಿ.ಕೆ.ಶಿವಕುಮಾರ್‌ ತೆರಳಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಗ್ಗೆಯೂ ಅಭಿಪ್ರಾಯ ಸಲ್ಲಿಕೆ:

ಇದೇ ವೇಳೆ ಸಚಿವ ಕೆ.ಎನ್‌. ರಾಜಣ್ಣ ಸೇರಿ ಸಿಎಂ ಸಿದ್ದರಾಮಯ್ಯ ಬಣದ ಸಚಿವರ ಬಹಿರಂಗ ಹೇಳಿಕೆಗಳು ಹಾಗೂ ಬಣ ರಾಜಕೀಯದ ಬೆಳವಣಿಗೆಗಳ ಬಗ್ಗೆ ಶಿವಕುಮಾರ್‌ ವರದಿ ನೀಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಅಧಿಕಾರ ಹಸ್ತಾಂತರ ಹೇಳಿಕೆಗಳು ಹಾಗೂ ಇದರಿಂದ ಪಕ್ಷಕ್ಕೆ ಆಗುತ್ತಿರುವ ಹಾನಿ ಕುರಿತು ವಿವರಣೆ ನೀಡಲಿದ್ದಾರೆ. ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ತಮ್ಮ ಅಭಿಪ್ರಾಯವನ್ನೂ ಹೈಕಮಾಂಡ್‌ಗೆ ತಿಳಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ನಾಳೆ ಕೇಂದ್ರ ಜಲಶಕ್ತಿ ಸಚಿವರ ಜತೆ ಡಿಕೆಶಿ ಭೇಟಿ 

ಮಧ್ಯ ಕರ್ನಾಟಕದ ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆಗೆ ಘೋಷಿತ 5,300 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಕೇಂದ್ರದ ಮುಂದೆ ಮತ್ತೊಮ್ಮೆ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಈ ಸಂಬಂಧ ಚರ್ಚಿಸಲು ಅವರು ದೆಹಲಿಗೆ ತೆರಳಲಿದ್ದು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಭೇಟಿ ಮಾಡಲಿದ್ದಾರೆ. ಇದೇ ವೇಳೆ, ಮೇಕೆದಾಟು, ಗೋದಾವರಿ ನದಿ ಜೋಡಣೆ ಸೇರಿ ರಾಜ್ಯದ ಇತರ ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ.

2018-19ರ ದರ ಪಟ್ಟಿ ಪ್ರಕಾರ ಭದ್ರಾ ಮೇಲ್ಡಂಡೆ ಯೋಜನೆಗೆ 21000 ಕೋಟಿ ರು.ಅಂದಾಜಿಸಲಾಗಿದೆ. ಯೋಜನೆಗೆ ಇದುವರೆಗೆ 10000 ಕೋಟಿ ರು.ಖರ್ಚು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ 11000 ಕೋಟಿ ರು.ಬೇಕು. ಮತ್ತೆ ದರ ಪರಿಷ್ಕರಣೆಗೆ ಒಳಪಟ್ಟರೆ ಐದಾರು ಸಾವಿರ ಕೋಟಿ ರು.ಗಳಷ್ಟು ಹೆಚ್ಚಾಗಲಿದೆ.

ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ, 5,300 ಕೋಟಿ ರು. ನೆರವು ನೀಡುವುದಾಗಿ ಹೇಳಿದ್ದರು. 2022-23ರ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 5,300 ಕೋಟಿ ರು. ಅನುದಾನ ಪ್ರಕಟಿಸಿದ್ದರು. ತರುವಾಯ ಮತ್ತೆರಡು ಬಜೆಟ್ ಮಂಡಿಸಿದರೂ ಕೇಂದ್ರದ ಘೋಷಿತ 5,300 ಕೋಟಿ ರು. ಅನುದಾನ ಕರ್ನಾಟಕಕ್ಕೆ ತಲುಪಿಲ್ಲ.

ಈ ನಡುವೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೋದಿ ಅವರನ್ನು 2 ಬಾರಿ ಭೇಟಿ ಮಾಡಿ ಭದ್ರಾ ಮೇಲ್ದಂಡೆಗೆ ಅನುದಾನ ನೀಡುವಂತೆ ಮನವಿ ಮಾಡಿದ್ದರಾದರೂ ಯಶ ಕಂಡಿಲ್ಲ.

10 ದಿನಗಳ ಹಿಂದೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಕಳೆದ ವಾರವಷ್ಟೇ ಮಾಜಿ ಪ್ರಧಾನಿ ದೇವೇಗೌಡ ಅವರು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದರು.