ಲೋಕಸಭಾ ಚುನಾವಣೆಯಲ್ಲಿ ಸ್ಟಾರ್‌ ಚಂದ್ರು ಕೈಬಿಡಬೇಡಿ: ಶಾಸಕ ರವಿಕುಮಾರ್‌

| Published : Mar 07 2024, 01:48 AM IST

ಲೋಕಸಭಾ ಚುನಾವಣೆಯಲ್ಲಿ ಸ್ಟಾರ್‌ ಚಂದ್ರು ಕೈಬಿಡಬೇಡಿ: ಶಾಸಕ ರವಿಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

2023ರ ವಿಧಾನಸಭಾ ಚುನಾವಣೆ ವೇಳೆ ಬಸರಾಳು ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ 15 ಸಾವಿರ ಜನ ಸೇರಿದ್ದಿರಿ. ಆದರೆ, ಬೂತ್ ತೆಗೆದಾಗ 500 ಮತಗಳು ಜನತಾದಳಕ್ಕೆ ಹೆಚ್ಚು ದೊರಕಿದ್ದವು. ಆ ಸಮಯದಲ್ಲಿ ನನಗೆ ಬಹಳ ಬೇಸರವಾಗಿತ್ತು. ಅದಕ್ಕಾಗಿ ನೇರವಾಗಿ ಹೇಳುತ್ತಿದ್ದೇನೆ. ನನ್ನನ್ನು ಕೈಬಿಟ್ಟ ಹಾಗೇ ಸ್ಟಾರ್ ಚಂದ್ರು ಅವರನ್ನು ಕೈ ಬಿಡಬೇಡಿ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸ್ಟಾರ್ ಚಂದ್ರು ಅವರಿಗೆ ಬಸರಾಳು ಹೋಬಳಿಯಲ್ಲಿ ಹತ್ತು ಸಾವಿರ ಲೀಡ್ ಕೊಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಮ್ಮನ್ನು ನಂಬಿ ಬಂದಿರುವ ಸ್ಟಾರ್ ಚಂದ್ರು ಅವರನ್ನು ಕೈ ಬಿಡಬೇಡಿ. ಜಿಲ್ಲೆಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಬಸರಾಳು ಗ್ರಾಮದಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2023ರ ವಿಧಾನಸಭಾ ಚುನಾವಣೆ ವೇಳೆ 15 ಸಾವಿರ ಜನ ಸೇರಿದ್ದಿರಿ. ಆದರೆ, ಬೂತ್ ತೆಗೆದಾಗ 500 ಮತಗಳು ಜನತಾದಳಕ್ಕೆ ಹೆಚ್ಚು ದೊರಕಿದ್ದವು. ಆ ಸಮಯದಲ್ಲಿ ನನಗೆ ಬಹಳ ಬೇಸರವಾಗಿತ್ತು. ಅದಕ್ಕಾಗಿ ನೇರವಾಗಿ ಹೇಳುತ್ತಿದ್ದೇನೆ. ನನ್ನನ್ನು ಕೈಬಿಟ್ಟ ಹಾಗೇ ಸ್ಟಾರ್ ಚಂದ್ರು ಅವರನ್ನು ಕೈ ಬಿಡಬೇಡಿ ಎಂದರು.

ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸ್ಟಾರ್ ಚಂದ್ರು ಅವರಿಗೆ ಬಸರಾಳು ಹೋಬಳಿಯಲ್ಲಿ ಹತ್ತು ಸಾವಿರ ಲೀಡ್ ಕೊಡಬೇಕು. ಒಂದೊಂದು ಬೂತ್‌ನಲ್ಲಿ ಐವತ್ತು ಮತಗಳನ್ನು ಹೆಚ್ಚು ಮಾಡುವುದನ್ನು ಬಸರಾಳು ಹೋಬಳಿ ಜನ ತೋರಿಸಬೇಕು. ಊರಿನಲ್ಲಿ ಸಣ್ಣಪುಟ್ಟ ವೈಮನಸ್ಸು ಬಿಟ್ಟು ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದರು.

ನಾನು ಶಾಸಕನಾದ ಮೇಲೆ ಬಸರಾಳು ಹೋಬಳಿಯಲ್ಲಿ ಎಂಟು ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ. ಮುತ್ತೇಗೆರೆ ರಸ್ತೆ ಅಭಿವೃದ್ಧಿಗೆ 10 ಕೋಟಿ ರು. ಟೆಂಡರ್ ಆಗಿದೆ. ಕಾರಿಮನೆ ಗೇಟ್‌ನಿಂದ 10 ಕೋಟಿ ರು., ಹುನುಗನಹಳ್ಳಿ-ನಂದಹಳ್ಳಿ ರಸ್ತೆ ಅಭಿವೃದ್ಧಿಗೆ 5 ಕೋಟಿ ರು. ಟೆಂಡರ್ ಆಗಿದೆ. ಹಲವಾರು ದಿನಗಳಿಂದ ಬೇಸಿಗೆಯಲ್ಲಿ ಕೆರೆ-ಕಟ್ಟೆಗಳನ್ನು ತುಂಬಿಸಲು ಆಗುತ್ತಿರಲಿಲ್ಲ ಈ ಬಾರಿ ನೀರಾವರಿ ಸಚಿವರು ಹಾಗೂ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಹೇಮಾವತಿ, ಗೊರೂರು ಜಲಾಶಯದಿಂದ ಬಸರಾಳು ಭಾಗದ ಕೆರೆಕಟ್ಟೆಗಳನ್ನು ತುಂಬಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ನುಡಿದಂತೆ ನಡೆದ ಸರ್ಕಾರ ಇದ್ದರೇ ಅದು ಕಾಂಗ್ರೆಸ್ ಸರ್ಕಾರ, ಜನರಲ್ಲಿಯೂ ಉಪಕಾರ ಸ್ಮರಣೆ ಇರಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ನೀವೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಆಶೀರ್ವಾದ ಮಾಡಬೇಕು. ಎಲ್ಲ ನಾಯಕರು ಒಮ್ಮತದಿಂದ ಮಂಡ್ಯ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಹೆಸರನ್ನ ತಿಳಿಸಿದ್ದಾರೆ. ಸ್ಟಾರ್ ಚಂದ್ರು ಉದ್ಯಮಿಯಾಗಿದ್ದು, ರಾಜಕೀಯ ಹಿನ್ನೆಲೆ ಕೂಡ ಇದೆ. ಸಂಸತ್ತಿನಲ್ಲಿ ಧ್ವನಿಗೂಡಿಸಲು ಸ್ಟಾರ್ ಚಂದ್ರುಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ ಎಚ್‌.ಬಿ.ರಾಮು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಎಂ.ಎಸ್.ಚಿದಂಬರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕಾಂಗ್ರೆಸ್ ಮುಖಂಡರಾದ ಸಿದ್ಧಾರೂಢ ಸತೀಶ್ ಗೌಡ, ಚಿಕ್ಕಬಳ್ಳಿ ಕೃಷ್ಣ, ಕಂಬದಹಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಿ.ಸಿ.ಆನಂದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜೇಗೌಡ,ಕರಿಗೌಡ, ಕೃಷ್ಣೇಗೌಡ, ರವಿಭೋಜೆಗೌಡ, ನಿಂಗರಾಜು ಇತರರು ಭಾಗವಹಿಸಿದ್ದರು.