ಸಾರಾಂಶ
ಸಚಿವ ಡಾ ಎಂ.ಸಿ.ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರು ಮಾಜಿ ಸಂಸದ ಎಸ್.ಮುನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಂತಾಮಣಿ : ಕಳೆದ 60 ವರ್ಷಗಳಿಂದ ರಾಜಕಾರಣದಲ್ಲಿರುವ ಸಚಿವ ಡಾ. ಎಂ.ಸಿ.ಸುಧಾಕರ್ ಕುಟುಂಬವು ಚಿಂತಾಮಣಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಅವಿಭಜಿತ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಅಂತಹ ಕುಟುಂಬದ ಬಗ್ಗೆ ಮಾತನಾಡುವ ಮುನ್ನಾ ಎಚ್ಚರಿಕೆ ವಹಿಸಬೇಕು. ತಪ್ಪಿದ್ದಲ್ಲಿ ತಕ್ಕಶಾಸ್ತಿ ಮಾಡಬೇಕಾದಿತೆಂದು ಸಚಿವ ಡಾ ಎಂ.ಸಿ.ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರು ಮಾಜಿ ಸಂಸದ ಎಸ್.ಮುನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಹರೀಶ್, ವಕ್ಫ್ ವಿಚಾರವಾಗಿ ಮಾಜಿ ಸಂಸದರು ಸಚಿವ ಡಾ.ಎಂ.ಸಿ.ಸುಧಾಕರ್‌ರ ವಿರುದ್ಧ ಹಗುರವಾಗಿ ಮಾತನಾಡಿರುವುದು ಶೋಭೆತರುವುದಿಲ್ಲ, ಡಾ.ಎಂ.ಸಿ.ಸುಧಾಕರ್‌ರನ್ನು ಮತಾಂತರಗೊಳ್ಳುವಂತೆ ಸೂಚಿಸಲು ನಿಮಗೇನು ಅಧಿಕಾರವಿದೆ ಎಂದು ಪ್ರಶ್ನಿಸಿದರು.
ಕಾನೂನು ಕೈಗೆತ್ತಿಕೊಳ್ಳಬೇಡಿ
ಮಾಜಿ ಸಂಸದರಾಗಿರುವ ನೀವು ಮೈಲೇಜ್ ಪಡೆಯಲು ಸಚಿವರ ವಿರುದ್ಧ ಹೇಳಿಕೆ ನೀಡಲು ಹೊರಟ್ಟಿದ್ದೀರೆ. ಇದಕ್ಕೆ ಬೆಲೆ ತೆರಬೇಕಾಗುತ್ತದೆ, ನ್ಯಾಯಾಲಯದ ವಿಚಾರಣೆಯಲ್ಲಿರುವ ವಿಚಾರವನ್ನು ಧಿಕ್ಕರಿಸಿ ವಕ್ಫ್ ಆಸ್ತಿಗೆ ಹಾಕಿರುವ ಬೇಲಿಯನ್ನು ಕಿತ್ತುಹಾಕುವುದಾಗಿ ಹೇಳುವ ಮೂಲಕ ತಾವು ಕಾನೂನನ್ನು ಕೈಗೆತ್ತಿಕೊಳ್ಳುವುದು ಹಕ್ಕೆಂದು ಭಾವಿಸಿದಂತಿದೆ ಎಂದು ಎಚ್ಚರಿಸಿದರು.
ಜನಪ್ರತಿನಿಧಿಯಾಗಿ ಆಯ್ಕೆಗೊಂಡರೆ ಅವರು ಎಲ್ಲ ಧರ್ಮದವರಿಗೂ ಸೇರಿದಂತಾಗಿ ಎಲ್ಲರಿಗೂ ಸಮಾನವಾದ ನ್ಯಾಯವನ್ನು ಒದಗಿಸಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮುಸ್ಲಿಂರಾಗಿ ಮತಾಂತರಗೊಳ್ಳುವಂತೆ ಹೇಳುತ್ತಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.
ಭಾವೈಕ್ಯತೆಗೆ ಧಕ್ಕೆ ತರಬೇಡಿ
ಮುಖಂಡ ಅಮರ್ ಮಾತನಾಡಿ ರಾಜ್ಯ ಹಾಗೂ ದೇಶದೆಲ್ಲೆಡೆ ಕೋಮುಗಲಭೆಗಳಾಗಿದ್ದರೂ ಚಿಂತಾಮಣಿಯಲ್ಲಿ ಹಿಂದೂ –ಮುಸ್ಲಿಂರು ಸಹೋದರರಂತೆ ಬಾಳ್ವೆ ನಡೆಸುವ ಮೂಲಕ ಕೋಮುಗಲಭೆಗಳಿಗೆ ಅವಕಾಶ ನೀಡಿಲ್ಲವೆಂಬುದನ್ನು ಮನಗಾಣಬೇಕು. ಮುರುಗಮಲ್ಲದ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾದ ಆಶೀರ್ವಾದ ಈ ಕ್ಷೇತ್ರದ ಮೇಲಿದೆ ಹಿಂದೂಗಳು ಮತ್ತು ಮುಸ್ಲಿಂ ಇಬ್ಬರೂ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾದ ಕೃಪೆಯಿದೆ. ನಾವೆಲ್ಲರೂ ಧರ್ಮ ಭೇದವಿಲ್ಲದೆ ಬದುಕನ್ನು ನಡೆಸುತ್ತಿದ್ದು ನೀವು ಇಲ್ಲಸಲ್ಲದ ಕಾರಣವನ್ನು ನೀಡುವುದರ ಮೂಲಕ ಹಿಂದೂ ಮುಸ್ಲಿಂರ ಭಾವೈಕ್ಯತೆಗೆ ಧಕ್ಕೆ ತರುವುದು ಶ್ರೇಯಸ್ಸಲ್ಲ ಎಂದರು.
ಬಿಜೆಪಿಯಿಂದ ಟಿಕೆಟ್ ಬರುವ ಮೊದಲು ಛಲವಾದಿ ನಾರಾಯಣಸ್ವಾಮಿರಿಗೆ ಅದು ನಿಗದಿಯಾಗಿತ್ತು. ಆಗ ಮುನಿಸ್ವಾಮಿ ಯಾರ ಕಾಲ ಹಿಡಿದು ಟಿಕೆಟ್ ಗಿಟ್ಟಿಸಿಕೊಂಡರು ಎಂಬುದನ್ನು ನೆನಪಿಸಿಕೊಳ್ಳಲಿ. ಹಿಂದೂಗಳಾಗಿದ್ದೇವೆ, ಹಿಂದೂಗಳಾಗಿ ಬದುಕುತ್ತಿದ್ದೇವೆ. ಜಾತಿ ಜಾತಿ ನಡುವೆ ಗಲಭೆ ಉಂಟು ಮಾಡಲು ನಿಮಗೇನು ಅಧಿಕಾರವಿದೆ. ನೀವು ಸಂಸದರಾಗಲು ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್‌ರ ಭಿಕ್ಷೆ ಮೂಲ ಕಾರಣ ಎಂಬುದನ್ನು ಮರೆತು ಮಾತನಾಡುವುದು ಸರಿಯಲ್ಲವೆಂದರು.
ಚಿಂತಾಮಣಿ ಪ್ರವೇಶಕ್ಕೆ ತಡೆ
ಪರಿಶಿಷ್ಟಜಾತಿಯ ಜಿಲ್ಲಾಧ್ಯಕ್ಷ ಚಿನ್ನಸಂದ್ರ ನಾರಾಯಣಸ್ವಾಮಿ ಮಾತನಾಡಿ, ಮುನಿಸ್ವಾಮಿ ಕೇವಲ ೫ ವರ್ಷಗಳ ಕಾಲ ಸಂಸದರಾಗಿದ್ದೀರಿ ನೀವು ಚಿಂತಾಮಣಿ ಸೇರಿದಂತೆ ಲೋಕಸಭಾ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಯೇನೆಂದು ಪ್ರಶ್ನಿಸಿದರು. ಸಚಿವ ಸುಧಾಕರ್‌ರ ಕುರಿತು ನೀವು ಹಗುರವಾಗಿ ಮಾತನಾಡುವುದು ಹಾಗೂ ನಾಲಿಗೆಯನ್ನು ಹರಿಬಿಟ್ಟರೆ ಮುಂದಿನ ದಿನಗಳಲ್ಲಿ ನೀವು ಚಿಂತಾಮಣಿ ನಗರ ಪ್ರವೇಶಿಸದಂತೆ ಅಸಂಖ್ಯಾತ ಕಾರ್ಯಕರ್ತರು ತಡೆಯೊಡ್ಡುವುದು ಶತಸಿದ್ಧವೆಂದರು.
ನಗರಸಭಾ ಸದಸ್ಯ ಜಗದೀಶ್ ಮಾತನಾಡಿ ಡಾ ಎಂ.ಸಿ.ಸುಧಾಕರ್‌ರವರು ನಿಮ್ಮ ಮಾಜಿ ಸಂಸದ ಮುನಿಸ್ವಾಮಿಯ ಸಹಕಾರದಿಂದ ಗೆದ್ದಿಲ್ಲ ಈ ಕ್ಷೇತ್ರದ ಪ್ರಬುದ್ಧ ಮತದಾರರು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಹರಿಕಾರರೆನಿಸಿಕೊಂಡಿರುವ ಡಾ ಎಂ.ಸಿ.ಸುಧಾಕರ್‌ರನ್ನು ಬಹುಮತದಿಂದ ಗೆಲ್ಲಿಸಿದ್ದಾರೆ ಎಂದರು.
ದೇವನಹಳ್ಳಿ ವೇಣುಗೋಪಾಲ್ ಮಾತನಾಡಿ, ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಸೌಹಾರ್ದ ಬದುಕಿಗೆ ಬೆಂಕಿ ಹಚ್ಚುವ ಕೆಲಸ ಮಾಡಬಾರೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಿರಣ್ಯಪಲ್ಲಿ ಕೃಷ್ಣಪ್ಪ, ಫಾರೂಕ್ ಮತ್ತು ಮಹೀಂದ್ರ ಉಪಸ್ಥಿತರಿದ್ದರು.