ಸಾರಾಂಶ
ಮೊಯ್ಲಿ ರಾಜಕೀಯಕ್ಕೆ ಯಾಕ್ ಬಂದ್ರು ಗೊತ್ತಾ? ರಾಜಕೀಯಕ್ಕೆ ಬರಲು ಒಪ್ಪದಿದ್ದರೆ ಭೂಸುಧಾರಣಾ ಕಾಯ್ದೆಯನ್ನೇ ಜಾರಿಗೆ ತರಲ್ಲ ಅಂದ ಬೆದರಿಕೆ ಹಾಕಿದ್ರಂತೆ ಅರಸು!
ಮೊಯ್ಲಿ ರಾಜಕೀಯಕ್ಕೆ ಯಾಕ್ ಬಂದ್ರು ಗೊತ್ತಾ?
- ರಾಜಕೀಯಕ್ಕೆ ಬರಲು ಒಪ್ಪದಿದ್ದರೆ ಭೂಸುಧಾರಣಾ ಕಾಯ್ದೆಯನ್ನೇ ಜಾರಿಗೆ ತರಲ್ಲ ಅಂದ ಬೆದರಿಕೆ ಹಾಕಿದ್ರಂತೆ ಅರಸು!
ಅರಸರು ಹೇಳದಿದ್ದರೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಇರಲಿಲ್ಲ. ಇಷ್ಟು ವರ್ಷಗಳ ಬಳಿಕ ಈಗ ಒಂದು ನಮೂನೆಯಲ್ಲಿ ರಾಜಕೀಯದಿಂದ ಬಿಡುಗಡೆ ಆಗಿದ್ದೇನೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ ಎಂದು ತಮ್ಮ ರಾಜಕೀಯ ಎಂಟ್ರಿಯ ಫ್ಲಾಶ್‌ಬ್ಯಾಕ್ ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ರಾಜಕಾರಣಕ್ಕೆ ಏಕೆ ಬಂದರು?
ಇಂತಹದೊಂದು ಪ್ರಶ್ನೆಗೆ, ಯಾಕಾದರೂ ಬಂದ್ರೋ ಅಂತ ಅನ್ನುವವರು ಇರಬಹುದು. ಹೇಗೋ ಬಂದ್ರಲ್ಲ, ಸದ್ಯ ಒಳ್ಳೆದಾಯ್ತು ಅಂತ ಹೇಳುವವರೂ ಇರಬಹುದು.
ಆದರೆ, ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಖುದ್ದು ಮೊಯ್ಲಿ ಅವರು ತಾವು ರಾಜಕಾರಣಕ್ಕೆ ಬಂದಿದ್ದು ಏಕೆ ಹಾಗೂ ಹೇಗೆ ಅನ್ನೋದನ್ನು ಸ್ವಾರಸ್ಯಕರವಾಗಿ ಹೇಳಿದರು. ಕೃಷಿ ಕಾರ್ಮಿಕನ ಮಗನಾಗಿದ್ದ ನಾನು ಉಪನ್ಯಾಸಕನಾಗಬೇಕು ಎಂಬ ಕನಸನ್ನು ಹೊಂದಿದ್ದೆ. ಆದರೆ ಕಾಲಕಳೆದಂತೆ ಭೂ ಸೂಧಾರಣಾ ಕಾಯ್ದೆ ಬಗ್ಗೆ ಒಲವು ಮೂಡಿಸಿಕೊಂಡು ಇದಕ್ಕಾಗಿಯೇ ವಕೀಲಿಕೆ ಮಾಡಲು ಆರಂಭಿಸಿದೆ.
‘ಹಾಗೇ ಮುಂದುವರೆದಿದ್ದರೆ ಕತೆ ಬೇರೆಯೇ ಇರುತ್ತಿತ್ತು. ನನ್ನ ಪಾಡಿಗೆ ಇದ್ದ ನನ್ನನ್ನು ಗಮನಿಸಿದ ದೇವರಾಜ ಅರಸು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಆಫರ್ ನೀಡಿದರು. ನಾನು ಇದನ್ನು ತಿರಸ್ಕರಿಸಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಹೋರಾಟ ನಡೆಸುತ್ತೇನೆ ಎಂದೆ. ಅದಕ್ಕೆ ಅರಸು ಅವರು, ನೀನು ಎಂಎಲ್‌ಎ ಆಗದಿದ್ದರೆ ಭೂ ಸುಧಾರಣಾ ಕಾಯ್ದೆಯನ್ನೇ ಜಾರಿ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದರು.’
‘ವಿಧಿಯಿಲ್ಲದೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿ ಶಾಸಕನಾದೆ. ಮರು ವರ್ಷವೇ ನನ್ನನ್ನು ಸಚಿವನನ್ನಾಗಿ ಮಾಡಿದರು. ಅರಸರು ಹೇಳದಿದ್ದರೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಇರಲಿಲ್ಲ. ಇಷ್ಟು ವರ್ಷಗಳ ಬಳಿಕ ಈಗ ಒಂದು ನಮೂನೆಯಲ್ಲಿ ರಾಜಕೀಯದಿಂದ ಬಿಡುಗಡೆ ಆಗಿದ್ದೇನೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ’ ಎಂದು ತಮ್ಮ ರಾಜಕೀಯ ಎಂಟ್ರಿಯ ಫ್ಲಾಶ್‌ಬ್ಯಾಕ್ ಹೇಳಿದರು.
ಇದನ್ನು ಕೇಳಿದ ಸಭಿಕರು ಅರಸು ಅವರಿಂದಾಗಿ ರಾಜಕೀಯಕ್ಕೆ ಬಂದ ಮೊಯ್ಲಿ ಅವರನ್ನು ಸಾಹಿತ್ಯಕ್ಕೆ ಸೆಳೆದವರು ಯಾರು ಎಂದು ಪ್ರಶ್ನಿಸಿದ್ದು ಸದ್ಯ ಮೊಯ್ಲಿ ಕಿವಿಗೆ ಬೀಳಲಿಲ್ಲ!
ಹೌ ಟು ಎಸ್ಕೇಪ್ ಫ್ರಮ್ ಇ.ಡಿ. ಬಗ್ಗೆ ಪಾಠ!
ಈ ಸಾಹೇಬರು ಬಿಬಿಎಂಪಿಯ ಪವರ್‌ಫುಲ್ ಎಂಜಿನಿಯರ್. ಜನ ಹೊಟ್ಟೆ ಉರಿಯಿಂದಾಗಿ ಭ್ರಷ್ಟಾಚಾರದಲ್ಲೂ ಇವರು ಪವರ್‌ಫುಲ್ ಅಂತ ಹೇಳ್ತಾರೆ. ಅದರೆ, ಅದನ್ನು ನಂಬಬೇಡಿ!
ಏಕೆಂದರೆ, ಇವರ ಭ್ರಷ್ಟಾಚಾರ ಪತ್ತೆ ಮಾಡಲು ದಾಳಿ ನಡೆಸಿದ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಸಾಹೇಬರ ಆತಿಥ್ಯಕ್ಕೆ ಮೆಚ್ಚಿ, ಖುಷ್ ಆಗಿ ಅಂತಿಮವಾಗಿ ಕಡೆಗೆ ಭೇಷ್ ಅಧಿಕಾರಿ ಕಣ್ರೀ ನೀವು ಎಂದು ಶಹಬ್ಬಾಸ್ ಗಿರಿ ಕೊಟ್ಟಿದ್ದಾರಂತೆ!
ವಿಷಯ ಏನಂತೀರಾ? ಇತ್ತೀಚೆಗೆ ಬೋರ್‌ವೆಲ್ ಹಗರಣದ ಅಕ್ರಮ ದಾಖಲೆ ಸಂಬಂಧ ಇ.ಡಿ. ಅಧಿಕಾರಿಗಳು ಬಿಬಿಎಂಪಿ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದರು. ಅದು ಎರಡು ದಿನ ನಡೆದ ಸುದೀರ್ಘ ಸರ್ಚ್ ಕಾರ್ಯಾಚರಣೆ.
ಹೇಗಾದ್ರೂ ಮಾಡಿ ಅಕ್ರಮ ಬಯಲಿಗೆಳೆದು ಭ್ರಷ್ಟರನ್ನು ಕಂಬಿ ಹಿಂದೆ ದೂಡಬೇಕು ಎಂದು ಹಾಸಿಗೆ, ದಿಂಬನ್ನೂ ಇ.ಡಿ. ಅಧಿಕಾರಿಗಳು ತರಿಸಿಕೊಂಡಿದ್ದರು. ಇ.ಡಿ. ಅಧಿಕಾರಿಗಳ ಘನ ಗಾಂಭೀರ್ಯತೆ ನೋಡಿ ಆ ಎಂಜಿನಿಯರ್ ಕಥೆ ಮುಗಿಯಿತು ಎಂದೆಲ್ಲಾ ಉಳಿದ ಅಧಿಕಾರಿಗಳು ಲೆಕ್ಕಾಚಾರದಲ್ಲಿ ಮುಳುಗಿದ್ದರು.
ಆದರೆ, ಎರಡನೇ ದಿನ ರಾತ್ರಿಯೂ ದಾಖಲೆಗಳ ಪರಿಶೀಲನೆ ಮುಂದುವರೆಯುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಇತರೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಕಚೇರಿ ತುಂಬಾ ತಡಕಾಡಿದ ಇ.ಡಿ. ಅಧಿಕಾರಿಗಳು ಯಾವುದೋ ‘ಬ್ಲ್ಯಾಕ್’ ಮ್ಯಾಜಿಕ್‌ಗೆ ಒಳಗಾದವರಂತೆ ಹೊರಟು ಹೋದರಂತೆ. ಕೆಲ ಫಾರ್ಮಾಲಿಟಿಗೆ ದಾಖಲೆಗಳನ್ನು ಕಳಿಸುವಂತೆ ಎಂಜಿನಿಯರ್‌ಗೆ ಹೇಳಿದ ಇ.ಡಿ. ಅಧಿಕಾರಿಗಳು ಹೋಗ್ತಾ ಹೋಗ್ತಾ ಬೆನ್ನು ತಟ್ಟಿ ಶಹಬ್ಬಾಸ್‌ಗಿರಿ ನೀಡಿದರಂತೆ.
ಈ ಸುದ್ದಿ ಬಿಬಿಎಂಪಿ ದಾಟಿ, ವಿಧಾನಸೌಧ ಹಾಗೂ ವಿಕಾಸಸೌಧಕ್ಕೂ ಹಬ್ಬಿದ್ದೇ ತಡ, ‘ಹೌ ಟು ಎಸ್ಕೇಪ್ ಫ್ರಂ ಇಡಿ, ಐಟಿ’ ಎಂದೆಲ್ಲ ಗೂಗಲ್ ಮಾಡುತ್ತಿದ್ದ ಹಿರಿಯ ಐಎಎಸ್‌ಗಳೆಲ್ಲ ಸಾಹೇಬರ ಬಳಿ ಟ್ಯೂಷನ್‌ಗೆ ಬರೋಕೆ ಬಟ್ಟೆ ಇಸ್ತ್ರಿ ಮಾಡ್ಕೋತಾ ಇದ್ದಾರಂತೆ!
ಬ್ಯಾನ್ ಅಂತ ಸಿಟ್ಟು ಬಂತು. ಆದರೆ... ಕಣ್ಣ ಮುಂದೆ ನಾನ್ ವೆಜ್ ಇತ್ತು!
‘ಹೇಳೋದು ಆಚಾರ, ತಿನ್ನೋದು ಬದನೆಕಾಯಿ’, ‘ಹೇಳೋದು ಒಂದು ಮಾಡೋದು ಮತ್ತೊಂದು’. ಈ ಗಾದೆ ಮಾತುಗಳಿಗೆಲ್ಲ ಪರ್ಫೆಕ್ಟ್ ಉದಾಹರಣೆ ಎಂದರೆ ಬಿಬಿಎಂಪಿ ಮತ್ತು ಏರೋ ಇಂಡಿಯಾ ಆಯೋಜಕರು.
ಯಾಕೆ ಅಂತೀರಾ? ಏರೋ ಇಂಡಿಯಾಗಾಗಿ ಈ ಬಿಬಿಎಂಪಿ ಹಾಗೂ ಏರೋ ಇಂಡಿಯಾದವರು ಬೆಂಗಳೂರು ಉತ್ತರದ ಮಾಂಸಾಹಾರ ಪ್ರಿಯರನ್ನು ಕಾಡಿ ಬಿಟ್ಟರು. ಉತ್ತರದಲ್ಲೆಲ್ಲೂ ಮಾಂಸ ಮಾರಂಗಿಲ್ಲ ಅಂತ ಬ್ಯಾನ್ ಮಾಡಿ ಬಿಟ್ರು. ಉತ್ತರದ ಹೋಟೆಲ್, ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಹಾಗೂ ಮಾರಾಟಕ್ಕೂ ನಿರ್ಬಂಧವೋ ನಿರ್ಬಂಧ. ಸೋ, ನಮ್ಮ ಬೆಂಗಳೂರು ಉತ್ತರದ ಮಾಂಸಾಹಾರ ಪ್ರಿಯರು ಒತ್ತಾಯ ಪೂರ್ವಕವಾಗಿ ಈ ಅವಧಿಯಲ್ಲಿ ಪುಳಿಚಾರ್ ಪ್ರಿಯರಾಗಬೇಕಾಯಿತು.
ಏರೋ ಇಂಡಿಯಾ ಆಕಾಶದಾಗೆ ಹಾರಾಡೋ ಲೋಹದ ಹಕ್ಕಿಗಳಿಗೆ ನಾರ್ಮಲ್ ಹಕ್ಕಿಗಳು ತೊಂದರೆ ಕೊಡದಿರಲು ಇದು ಅನಿವಾರ್ಯ ಅಂತ ನಮ್ಮ ಉತ್ತರದವರು ಸಮಾಧಾನವಾಗೇನೋ ಇದ್ದರು. ಆದರೆ, ಆ ಶೋ ನೋಡಲು ಹೋದವರಿಗೆ ಶಾಕ್ ಕಾದಿತ್ತು.
ಏಕೆಂದರೆ, ಅಲ್ಲಿನ ಆಹಾರ ಮಳಿಗೆಗಳಲ್ಲಿ ವೈಮಾನಿಕ ಪ್ರದರ್ಶನ ನಡೆಯುವಾಗಲೇ ಈಜುವ ಮೀನಿಂದ ಹಿಡಿದು ಎರಡು ಕಾಲಿನ ಕೋಳಿ, ನಾಲ್ಕು ಕಾಲಿನ ಕುರಿ, ಮೇಕೆ ಸೇರಿ ಎಲ್ಲಾ ರೀತಿಯ ಮಾಂಸಾಹಾರದ ಖಾದ್ಯಗಳೂ ಲಭ್ಯವಿತ್ತು.
ಅರೇ ಇಸ್ಕಿ... ನಮಗೆ ಮಾತ್ರ ಬ್ಯಾನ್ ಮಾಡಿ, ಇಲ್ಲಿ ಭರ್ಜರಿ ವ್ಯಾಪಾರ ಮಾಡ್ತಾವರಲ್ಲ ಅಂತ ಸಿಟ್ಟೇನೋ ಬಂತು. ಆದರೆ, ಕಣ್ಣ ಮುಂದೆ ನಾನ್ ವೆಜ್ ಇತ್ತು. ಸೋ, ಕೋಪ ಬಿಟ್ಹಾಕಿ ಭರ್ಜರಿ ವ್ಯಾಪಾರ ಮಾಡಿದ್ರು.
- ಸಿದ್ದು ಚಿಕ್ಕಬಳ್ಳೇಕೆರೆ
- ವಿಶ್ವನಾಥ್ ಮಲೆಬೆನ್ನೂರು
- ಶ್ರೀಕಾಂತ್ ಎನ್. ಗೌಡಸಂದ್ರ