ಯುದ್ಧಕ್ಕೆ ನಿಂತಾಗ ಎದುರಾಳಿ ಯಾರೆಂದು ನೋಡೋಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Mar 26 2024, 01:17 AM IST

ಯುದ್ಧಕ್ಕೆ ನಿಂತಾಗ ಎದುರಾಳಿ ಯಾರೆಂದು ನೋಡೋಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿ ಅವರು ಒಂದು ಕಡೆ ಹೋದಾಗ ಅದು ನನ್ನ ಕರ್ಮಭೂಮಿ ಎನ್ನುತ್ತಾರೆ. ರಾಮನಗರ, ಮಂಡ್ಯ, ಚನ್ನಪಟ್ಟಣದಲ್ಲೂ ಅದೇ ಮಾತು ಹೇಳುತ್ತಾರೆ. ರಾಮನಗರವನ್ನು ಪೂರ್ಣವಾಗಿ ತಿರಸ್ಕರಿಸಿ ಮಂಡ್ಯಕ್ಕೆ ಬರುವರೋ ಅಥವಾ ಅರ್ಧಕ್ಕೆ ಬಿಟ್ಟು ಇಲ್ಲಿಗೆ ಬರುವರೋ ಅಥವಾ ಕೊನೇ ಘಳಿಗೆಯಲ್ಲಿ ಬೇರೆ ಯಾರನ್ನಾದರೂ ಕಣಕ್ಕಿಳಿಸುವರೋ ಗೊತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಜನರು ಸೂಕ್ಷ್ಮಮತಿಗಳು ಹಾಗೂ ಬುದ್ಧಿವಂತರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊರಗಿನವರಿಗೆ ಭಾವನಾತ್ಮಕವಾಗಿ ಎಂದೂ ಮಣಿದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಹೇಳಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಲೋಕಸಭಾ ಅಭ್ಯರ್ಥಿ ಸ್ಟಾರ್‌ಚಂದ್ರು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಒಂದು ಕಡೆ ಹೋದಾಗ ಅದು ನನ್ನ ಕರ್ಮಭೂಮಿ ಎನ್ನುತ್ತಾರೆ. ರಾಮನಗರ, ಮಂಡ್ಯ, ಚನ್ನಪಟ್ಟಣದಲ್ಲೂ ಅದೇ ಮಾತು ಹೇಳುತ್ತಾರೆ. ರಾಮನಗರವನ್ನು ಪೂರ್ಣವಾಗಿ ತಿರಸ್ಕರಿಸಿ ಮಂಡ್ಯಕ್ಕೆ ಬರುವರೋ ಅಥವಾ ಅರ್ಧಕ್ಕೆ ಬಿಟ್ಟು ಇಲ್ಲಿಗೆ ಬರುವರೋ ಅಥವಾ ಕೊನೇ ಘಳಿಗೆಯಲ್ಲಿ ಬೇರೆ ಯಾರನ್ನಾದರೂ ಕಣಕ್ಕಿಳಿಸುವರೋ ಗೊತ್ತಿಲ್ಲ. ಮೂರು ಬಾರಿ ಮುಖ್ಯಮಂತ್ರಿ ಮಾಡಿದ ರಾಮನಗರವನ್ನು ನನ್ನ ಪ್ರಾಣ ಇರೋವರೆಗೂ ಬಿಟ್ಟುಹೋಗೋಲ್ಲ ಎನ್ನುತ್ತಿದ್ದರು. ಈಗ ರಾಮನಗರ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ ಎಂದು ಅಲ್ಲಿಯ ಜನರೇ ಹೇಳುತ್ತಿದ್ದಾರೆ. ಈಗ ಏನು ನಿರ್ಧಾರ ಮಾಡುವರೋ ನೋಡಬೇಕಿದೆ ಎಂದರು.

ಲಘುವಾಗಿ ಮಾತನಾಡೋಲ್ಲ:

ಕುಮಾರಸ್ವಾಮಿ ಅವರು ದೇವೇಗೌಡರ ಮಗ, ಮಾಜಿ ಮುಖ್ಯಮಂತ್ರಿ. ಅಲ್ಲದೇ, ರಾಜ್ಯದ ನಾಯಕ. ಅವರ ಬಗ್ಗೆ ಗೌರವವಿದೆ. ನಾವು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಹೊರಗಿನವರಿಗೆ ಜಿಲ್ಲೆಯ ಜನರು ಅಷ್ಟು ಸುಲಭವಾಗಿ ಅವಕಾಶ ನೀಡಿಲ್ಲ. ಭಾವನಾತ್ಮಕವಾಗಿ ಮಣಿದಿರುವ ನಿದರ್ಶನಗಳೂ ಇಲ್ಲ. ಜಿಲ್ಲೆಯ ಜನರು ತೀರ್ಮಾನ ಮಾಡುವಾಗ ಹತ್ತು ಬಾರಿ ಯೋಚನೆ ಮಾಡುತ್ತಾರೆ. ನಮ್ಮ ಅಭಿವೃದ್ಧಿ ನೋಡಿಕೊಂಡು ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಒಮ್ಮೆ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ನಮ್ಮ ಚುನಾವಣೆ ನಾವು ಮಾಡುತ್ತೇವೆ. ನಾವು ಜನರ ಮುಂದೆ ನಮ್ಮ ಕೆಲಸ ಇಟ್ಟುಕೊಂಡು ಹೋಗುತ್ತೇವೆಯೇ ವಿನಃ ನಾವು ಯಾವುದು ಸುಲಭ, ಕಷ್ಟ ಎಂದು ಜನರ ಮುಂದೆ ಹೋಗುವುದಿಲ್ಲ ಎಂದರು.

ಸುಮಲತಾ ಜೊತೆ ಮಾತನಾಡಿಲ್ಲ:

ಯುದ್ಧಕ್ಕೆ ನಿಂತಾಗ ಎದುರಾಳಿ ಯಾರೆಂದು ನೋಡುವುದಿಲ್ಲ. ನಾವು ಯಾರನ್ನೋ ಸೋಲಿಸಲು ಇನ್ಯಾರನ್ನೋ ತಂದು ನಿಲ್ಲಿಸುವುದೂ ಇಲ್ಲ. ಸಂಸದೆ ಸುಮಲತಾ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಯುವಂತೆ ನಾವಂತೂ ಹೇಳಿಲ್ಲ. ಕಳೆದ ಚುನಾವಣೆಯಿಂದ ಇಲ್ಲಿಯವರೆಗೂ ಅವರ ಜೊತೆ ರಾಜಕೀಯವಾಗಿ ನಾವು ಮಾತಾಡಿಯೂ ಇಲ್ಲ. ಅವರ ನಿಲುವುಗಳ ಬಗ್ಗೆ ಪ್ರಶ್ನೆಯನ್ನೂ ಮಾಡಿಲ್ಲ. ಅವರು ಯಾವ ನಿರ್ಧಾರ ಕೈಗೊಂಡರೂ ನಮ್ಮ ಅಭ್ಯಂತರವಿಲ್ಲ ಎಂದು ನುಡಿದರು.

ವೈಯಕ್ತಿಕವಾಗಿ ಸುಮಲತಾ ಮತ್ತು ನಾವು ವಿಶ್ವಾಸದಿಂದ ಇದ್ದೇವೆ. ಸದ್ಯ ಸುಮಲತಾ ಅವರ ನಡುವೆ ರಾಜಕೀಯ ಮಾತುಕತೆ ನಡೆಸುವ ಪ್ರಮೇಯ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶೀಘ್ರದಲ್ಲೇ ಕೆಸಿಎನ್ ಕಾಂಗ್ರೆಸ್ ಸೇರ್ಪಡೆ:

ನಮ್ಮ ಸಂಪರ್ಕದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಇದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ನಾರಾಯಣಗೌಡ ಬರುತ್ತಾರೆ. ಅತಿ ಶೀಘ್ರದಲ್ಲೇ ನಾರಾಯಣಗೌಡ ಹಾಗೂ ಕೆ.ಆರ್.ಪೇಟೆ ಭಾಗದ ಮುಖಂಡರು ಪಕ್ಷ ಸೇರ್ಪಡೆ ಆಗಲಿದ್ದಾರೆ. ನಾರಾಯಣಗೌಡ ಸೇರ್ಪಡೆ ದಿನಾಂಕ ಇನ್ನೂ ನಿಗಧಿಯಾಗಿಲ್ಲ ಎಂದರು.

ಗ್ಯಾರಂಟಿ ಸಮಾವೇಶದ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದೊಳಗೆ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿದ್ದೇವೆ. ಎರಡನೇ ಹಂತದಲ್ಲಿ ಎಲ್ಲಾ ತಾಲೂಕಿನಲ್ಲಿ ಸಭೆ ಮಾಡುತ್ತಿದ್ದೇವೆ. ಯಾವ ಯಾವ ತಾಲೂಕಿನಲ್ಲಿ ಹೇಗೆ ಪ್ರಚಾರ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದು, ಮಂತ್ರಿಗಳು, ಶಾಸಕರು, ಸ್ಥಳೀಯ ನಾಯಕರ ಚುನಾವಣಾ ಕಾರ್ಯಚಟುವಿಕೆ ಹೇಗಿರಬೇಕೆಂದು ನಿಗಧಿ ಮಾಡುವುದಾಗಿ ತಿಳಿಸಿದರು.

ಪ್ರತಿ ತಾಲೂಕಿನಲ್ಲಿ ಸಭೆ ನಡೆಸಲಾಗುತ್ತಿದ್ದು, ಮಾ.೨೭ಕ್ಕೆ ನಮ್ಮ ತಾಲೂಕುವಾರು ಸಭೆ ಮುಕ್ತಾಯವಾಗಲಿದೆ. ಏ.೧ಕ್ಕೆ ನಾವು ನಾಮಪತ್ರ ಸಲ್ಲಿಸುತ್ತೇವೆ. ಸದ್ಯದಲ್ಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬರಲಿದ್ದಾರೆ. ಕೆ.ಆರ್.ಪೇಟೆ, ಕೆ.ಆರ್.ನಗರದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಮಾಡಲು ಉದ್ದೇಶಿಸಿದ್ದು, ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಆಗಮಿಸುವ ಸಾಧ್ಯತೆಗಳಿವೆ ಎಂದರು.

ಶಾಸಕ ಪಿ.ರವಿಕುಮಾರ, ಲೋಕಸಭೆ ಅಭ್ಯರ್ಥಿ ವೆಂಕಟರಮಣೇಗೌಡ ಇತರರಿದ್ದರು.

ಮೇಕೆದಾಟು ಅಣೆಕಟ್ಟು ಜಾರಿ ಎಲೆಕ್ಷನ್ ಗಿಮಿಕ್

ಕನ್ನಡಪ್ರಭ ವಾರ್ತೆ ಮಂಡ್ಯ

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಸೇರಿಸಿರುವುದು ಕೇವಲ ಎಲೆಕ್ಷನ್ ಗಿಮಿಕ್‌ ಎಂದು ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಗಾಲಾಗಿದೆ. ವಿನಾಕಾರಣ ವಿಳಂಬ ಮಾಡುತ್ತಾ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದೆ. ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದ ಸಮಯದಲ್ಲೇ ಮಂಜೂರಾತಿ ದೊರಕಿಸಬಹುದಿದ್ದರೂ ಸಮಸ್ಯೆಯನ್ನು ಜೀವಂತವಾಗಿಡುವುದು ಮುಖ್ಯ ಉದ್ದೇಶವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.