ಬೆಂಗಳೂರು : ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಕೇವಲ ಮಾಹಿತಿ ನೀಡಿದರೆ ಸಾಲದು, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ನಾನು ಕೇಳಿದ್ದರಲ್ಲಿ ತಪ್ಪಿದ್ದರೆ ಅಥವಾ ಲೋಪ ಇದ್ದರೆ ಸಾಬೀತುಪಡಿಸಲಿ. ತಿದ್ದಿಕೊಳ್ಳಲು ತಯಾರಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆ ಮೂಲಕ ‘ಆರ್‌ಎಸ್ಎಸ್ ಪಥಸಂಚಲನ ವಿಚಾರದಲ್ಲಿ ಮಾಹಿತಿ ನೀಡಿದರೆ ಸಾಲದು ಅನುಮತಿ ಕೇಳಿ ಪಡೆದುಕೊಳ್ಳಿ’ ಎಂಬ ತಮ್ಮ ಹೇಳಿಕೆ ಸಮರ್ಥಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆ ಆರ್‌ಎಸ್‌ಎಸ್‌ನ ಆಳು ಮಕ್ಕಳಲ್ಲ. ಮಾಹಿತಿ ಕೊಟ್ಟಿದ್ದೇವೆ, ವ್ಯವಸ್ಥೆ ಮಾಡಿ ಎಂದು ಹೇಳಿದರೆ ಪೊಲೀಸ್ ಇಲಾಖೆ ಮಾಡುವುದಿಲ್ಲ. ಆರ್‌ಎಸ್‌ಎಸ್‌ ಕಾನೂನು, ಸಂವಿಧಾನಕ್ಕಿಂತ ಮೇಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಬಹಳಷ್ಟು ಜನ ಹಬ್ಬ ಆಚರಿಸುತ್ತಾರೆ. ಅವರೆಲ್ಲಾ ಗಣೇಶ ಮೆರವಣಿಗೆ ಮಾಡುವಾಗ ಮಾಹಿತಿ ನೀಡುತ್ತಾರಾ ಅಥವಾ ಅನುಮತಿ ಕೇಳುತ್ತಾರಾ? ಮನೆ ಕಾರ್ಯಕ್ರಮ ಮಾಡಬೇಕಾದರೆ ರಸ್ತೆ ಮೇಲೆ ಪೆಂಡಾಲ್ ಹಾಕಿದಾಗಲೂ ಅನುಮತಿ ಕೇಳುತ್ತಾರೆ. ಎಲ್ಲರಿಗೂ ಒಂದೇ ನಿಯಮ, ಅದು ಆರ್‌ಎಸ್ಎಸ್‌ಗೂ ಅನ್ವಯಿಸುತ್ತದೆ ಅಲ್ಲವೇ ಎಂದು ಪ್ರಿಯಾಂಕ್‌ ಪ್ರಶ್ನಿಸಿದರು.

ಮನೆ ಕೆಲಸದವರಲ್ಲ:

ಪಥಸಂಚನಲದ ವಿಚಾರದಲ್ಲಿ ದಯವಿಟ್ಟು ಪೊಲೀಸ್ ಇಲಾಖೆಗೆ ಹಾಗೂ ಸರ್ಕಾರಗಳಿಗೆ ಗೌರವ ನೀಡುವುದು ಕಲಿಯಲಿ. ಸೂಕ್ತ ಕ್ರಮ ವಹಿಸಿ ಎಂದರೆ ಇಲಾಖೆಯವರು ಅವರ ಮನೆಯಲ್ಲಿ ಕೆಲಸ ಮಾಡುವವರಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಆರ್‌ಎಸ್ಎಸ್‌ ಸಂಘಟನೆಗೆ 100 ವರ್ಷದ ಇತಿಹಾಸವಿದೆ ಎಂಬ ಪ್ರಶ್ನೆಗೆ, ನೂರು ವರ್ಷದ ಇತಿಹಾಸದಲ್ಲಿ ಯಾವ ಪ್ರತಿಭಟನೆ ಮಾಡಿದ್ದಾರೆ? ಯಾವ ಹೋರಾಟ ಮಾಡಿದ್ದಾರೆ. ಬ್ರಿಟಿಷರ ಗುಲಾಮರು, ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದವರು. ಬ್ರಿಟೀಷರ ಬಳಿ 60 ರು. ಪಿಂಚಣಿ ಪಡೆಯುತ್ತಿದ್ದ ಸಾವರ್ಕರ್‌ ಇವರ ನಾಯಕರು. ಇವರಿಂದ ನಾವೇನು ಕಲಿಯಬೇಕು? ಎಂದು ಪ್ರಶ್ನಿಸಿದರು.

ಆಡಳಿತ ಹೇಗೆ ಬದಲಿಸಲು ಆಗುತ್ತದೆ? ದೇಶದಲ್ಲಿ ಆಡಳಿತ ಬದಲಿಸಲು ವಿದೇಶಗಳ ಯತ್ನ ಎಂಬ ಮೋಹನ್ ಭಾಗವತ್ ಹೇಳಿಕೆಗೆ, ‘ಆಡಳಿತ ಹೇಗೆ ಬದಲಿಸಲಾಗುತ್ತದೆ? ಚುನಾವಣಾ ಆಯೋಗ, ಇವಿಎಂ, ಮತದಾರರ ಪಟ್ಟಿ ಎಲ್ಲವೂ ಅವರ ಬಳಿಯೇ ಇದೆ. ಫಾರ್ಮ್-6, ಫಾರ್ಮ್‌-7 ಎಲ್ಲವೂ ಅವರ ಬಳಿಯೇ ಇದ್ದಾಗ ಹೇಗೆ ಬದಲಿಸಲಾಗುತ್ತದೆ. ಚುನಾವಣಾ ಆಯೋಗಕ್ಕೆ ನ್ಯಾಯಾಂಗದ ಇಮ್ಯುನಿಟಿ ನೀಡಿದವರು ಯಾರು? ಇವೆಲ್ಲಾ ಯಾಕೆ ಮಾಡಿದರು ಗೊತ್ತಿಲ್ಲವೇ? ಎಂದು ಪ್ರಿಯಾಂಕ್‌ ಟೀಕಿಸಿದರು.

ಗೃಹ ಸಚಿವರ ಆಕ್ಷೇಪ

ರಾಜ್ಯವ್ಯಾಪಿ ಪಥಸಂಚಲನ ಬಗ್ಗೆ ಪೊಲೀಸರಿಗೆ ಆರ್‌ಎಸ್‌ಎಸ್‌ನಿಂದ ಮಾಹಿತಿ

ಪಥಸಂಚಲನ ಇದೆ ವ್ಯವಸ್ಥೆ ಮಾಡಿ ಎಂಬ ಮಾಹಿತಿಗೆ ಪ್ರಿಯಾಂಕ್‌ ಖರ್ಗೆ ಆಕ್ಷೇಪ

ಈ ಬಗ್ಗೆ ಮಾಹಿತಿ ನೀಡಿದ್ರೆ ಸಾಲದು, ಅನುಮತಿ ಪಡೆದುಕೊಳ್ಳಿ ಎಂದು ಸೂಚನೆ

ವ್ಯವಸ್ಥೆ ಮಾಡಿ ಎಂದು ಹೇಳಿದ್ರೆ ಮಾಡಲ್ಲ, ನೀವು ಸಂವಿಧಾನಕ್ಕಿಂತ ಮೇಲಲ್ಲ

ದಯವಿಟ್ಟು ಪೊಲೀಸ್ ಇಲಾಖೆ, ಸರ್ಕಾರಗಳಿಗೆ ಗೌರವ ನೀಡುವುದು ಕಲಿಯಲಿ