ಡಾ.ಕೆ.ಸುಧಾಕರ್ ಟಿಕೆಟ್‌: ಮುಖಂಡರು, ಕಾರ್ಯಕರ್ತರ ಸಂಭ್ರಮ

| Published : Mar 26 2024, 01:05 AM IST

ಸಾರಾಂಶ

ಎನ್ ಡಿಎ ಮೈತ್ರಿ ಕೂಟದ ಎಲ್ಲ ಅಭ್ಯರ್ಥಿಗಳು ಸೇರಿ ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳಲ್ಲಿ ಗೆದ್ದು, ದೇಶದ 400 ಹೆಚ್ಚು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆದ್ದು ನರೇಂದ್ರ ಮೋದಿಯವರು ಮೂರನೆ ಬಾರಿಗೆ ಮತ್ತೆ ಪ್ರಧಾನಮಂತ್ರಿ ಆಗುತ್ತಾರೆಂಬ ವಿಶ್ವಾಸ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾಜಿ ಸಚಿವ ಡಾ.ಕೆ.ಸುಧಾಕರ್ ರವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಅವರ ಮಗ ಅಲೋಕ್ ವಿಶ್ವನಾಥ್ ಹಾಗೂ ಮಾಜಿ ಸಚಿವ ಡಾ.ಕೆ. ಸುಧಾಕರ್ ರ ನಡುವೆ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿ ಕೊನೆಗೂ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಯಶಸ್ವಿಯಾಗಿದ್ದಾರೆ. ಸ್ವಗ್ರಾಮ ಪರೇಸಂದ್ರದಲ್ಲಿ ಸಂಭ್ರಮ

ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಇತ್ತ ಮಾಜಿ ಸಚಿವರ ತವರೂರಾದ ಪೆರೇಸಂದ್ರಗ್ರಾಮದಲ್ಲಿ ಯುವ ಮುಖಂಡ ಗಿರೀಶ್ ಹಾಗೂ ಪರೆಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚೆನ್ನ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಾಚರಣೆ ಮಾಡಿಕೊಂಡರು. ಮಾಜಿ ಸಚಿವ ಡಾ.ಕೆ.ಸುಧಾಕರ್ ಗೆ ಟಕೆಟ್ ಸಿಕ್ಕ ಸಂತಸದ ಬೆನ್ನಲ್ಲೇ ಸುಧಾಕರ್ ರವರ ತಂದೆ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಸೋಮವಾರ ದೇವಾಲಯಗಳಿಗೆ ಭೇಟಿ ನೀಡಿ, ಮಗನ ಹೆಸರಲ್ಲಿ ವಿಶೇಷ ಪೂಜೆ ಮತ್ತು ಅರ್ಚನೆ ಮಾಡಿಸಿದರು. ತಾಲ್ಲೂಕಿನ ಚಿಕ್ಕಪ್ಯಾಯಲಗುರ್ಕಿಯ ಚನ್ನಕೇಶವ ದೇವಾಲಯ, ಗೋಪಿನಾಥ ಸ್ವಾಮಿ ಬೆಟ್ಟದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ,ಚಿಕ್ಕಕಾಡಿಗಾನಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಗನ ಹೆಸರಲ್ಲಿ ವಿಶೇಷ ಪೂಜೆ,ಅರ್ಚನೆ ಮಾಡಿಸಿ, ಮಗನು ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿದರು.

ರಾಜ್ಯದ ಎಲ್ಲ ಸ್ಥಾನ ಬಿಜೆಪಿಗೆಈ ವೇಳೆ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಡಾ.ಸುಧಾಕರ್‌ ಹಾಗೂ ಬಿಜೆಪಿಗೆ ಮತ ನೀಡುವಂತೆ ಪ್ರಾರ್ಥಿಸಿದರು. ಸುಧಾಕರ್‌ಗೆ ಎಂಟು ವಿಧಾನಸಭಾ ಕ್ಷೇತ್ರದಿಂದ ಅದ್ಭುತವಾದ ಲೀಡ್ ಬಂದು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ಎನ್ ಡಿಎ ಮೈತ್ರಿ ಕೂಟದ ಎಲ್ಲ ಅಭ್ಯರ್ಥಿಗಳು ಸೇರಿ ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳಲ್ಲಿ ಗೆದ್ದು, ದೇಶದ 400 ಹೆಚ್ಚು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆದ್ದು ನರೇಂದ್ರ ಮೋದಿಯವರು ಮೂರನೆ ಬಾರಿಗೆ ಮತ್ತೆ ಪ್ರಧಾನಮಂತ್ರಿ ಆಗಬೇಕು ಎಂದರು.ಈ ಸಂಭ್ರಮಾಚರಣೆಯಲ್ಲಿ ಮುಖಂಡರುಗಳಾದ ಗಿರೀಶ್. ಅರವಿಂದ್. ಬೊಮ್ಮನಹಳ್ಳಿ ನಾರಾಯಣಸ್ವಾಮಿ. ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಿಕ್ಕಗರಿಗಿರೆಡ್ಡಿ.ಚನ್ನಾರೆಡ್ಡಿ, ಚನ್ನಕೇಶವರೆಡ್ಡಿ,ಅಪಾರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮತ್ತಿತರರು ಇದ್ದರು.

ಸಿಕೆಬಿ-5 ಚೆನ್ನ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಡಾ. ಕೆ.ಸುಧಾಕರ್ ರವರ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿಕೊಂಡರು.