ಸಾರಾಂಶ
ಶಿಡ್ಲಘಟ್ಟ : ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ತಾವು ಇಲ್ಲಿವರೆಗೂ 3 ಬಾರಿ ಪ್ರತಿನಿಧಿಸಿದ್ದು, ಒಮ್ಮೆ ಮಾತ್ರ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿದ್ದೆ. ಉಳಿದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆಂದು ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇನೆ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರು ಕಳೆದ ಒಂದು ವಾರದಿಂದ ಮನೆ ಮನೆಗೂ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. 8ರಂದು ಅಭ್ಯರ್ಥಿ ಘೋಷಣೆ
ಎರಡನೇ ಹಂತದ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮತದಾನ ಮುಗಿದ ಬಳಿಕ ಮೇ 8ರಂದು ಪಕ್ಷದ ರಾಜ್ಯದ ಹಿರಿಯ ನಾಯಕರು ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಿ ಘೋಷಿಸಲಿದ್ದಾರೆ. ಆದರೆ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದರೂ ಅಥವಾ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಎನ್‌ಡಿಎ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ, ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಅವರು ತಿಳಿಸಿದರು.
ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಣೆ ಆಗಿದ್ದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಸಿದ್ಧತೆಗಳು ಕೂಡ ನಡೆದಿವೆ ಎಂದ ಅವರು, ಇಡೀ ಕ್ಷೇತ್ರದಲ್ಲಿ 23,514 ಮಂದಿ ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆಂದರು.
ಈ ಸಂದರ್ಭದಲ್ಲಿ ಅಕ್ಷರ ಕಾಲೇಜು ಪ್ರಾಂಶುಪಾಲ ಪ್ರಕಾಶ್, ಡಾಲ್ಫಿನ್ ಶಾಲೆಯ ಸಂಸ್ಥಾಪಕ ನಾಗರಾಜ್, ನಿವೃತ್ತ ಶಿಕ್ಷಕರಾದ ಕೆಂಪಣ್ಣ , ಎಸ್.ವಿ.ನಾಗರಾಜರಾವ್, ಮೇಲೂರು ಮುರಳಿ, ವಾಸವಿ ಶಾಲೆ ಶಿಕ್ಷಕ ಹರೀಶ್, ಅಮರ್ ಸೇರಿದಂತೆ ಮತ್ತಿತರರು ಇದ್ದರು.