ಮನೆಗಳಲ್ಲಿ ದಸರಾ ಗೊಂಬೆಗಳ ದರ್ಬಾರ್ ಶುರು
KannadaprabhaNewsNetwork | Published : Oct 18 2023, 01:00 AM IST
ಮನೆಗಳಲ್ಲಿ ದಸರಾ ಗೊಂಬೆಗಳ ದರ್ಬಾರ್ ಶುರು
ಸಾರಾಂಶ
ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಕಲಾ ಪ್ರಜ್ಞೆಯನ್ನು ರೂಢಿಸಿಕೊಂಡು ಬಂದಿರುವ ದೊಡ್ಡಬಳ್ಳಾಪುರ ಸಂಸ್ಕೃತಿಯ ನಿರಂತರ ರಾಯಭಾರದ ಮಹತ್ವದ ಹೊಣೆಗಾರಿಕೆಯನ್ನು ತನ್ನೊಟ್ಟಿಗೆ ಬೆಳೆಸಿಕೊಂಡು ಬರುತ್ತಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ನಿರ್ಮಾಣವಗುವ ಗೊಂಬೆ ಮನೆಗಳು. ಸಾಂಪ್ರದಾಯಿಕ ಆಚರಣೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಹಾದಿಯಲ್ಲಿ ಗಮನ ಸೆಳೆಯುವುದು ವಿಶೇಷ.
ದೊಡ್ಡಬಳ್ಳಾಪುರದಲ್ಲೆಡೆ ನವರಾತ್ರಿ ಗೊಂಬೆಗಳ ಹಬ್ಬ ಜೋರೋಜೋರು । ಸಾಂಪ್ರದಾಯಿಕ ಆಚರಣೆಗೆ ಆಧುನಿಕ ಸ್ಪರ್ಶ, ದಸರೆಯ ಸಂಭ್ರಮಕ್ಕೆ ಕಲರ್‌ಫುಲ್ ಮೆರಗು ಕೆ.ಆರ್.ರವಿಕಿರಣ್ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಕಲಾ ಪ್ರಜ್ಞೆಯನ್ನು ರೂಢಿಸಿಕೊಂಡು ಬಂದಿರುವ ದೊಡ್ಡಬಳ್ಳಾಪುರ ಸಂಸ್ಕೃತಿಯ ನಿರಂತರ ರಾಯಭಾರದ ಮಹತ್ವದ ಹೊಣೆಗಾರಿಕೆಯನ್ನು ತನ್ನೊಟ್ಟಿಗೆ ಬೆಳೆಸಿಕೊಂಡು ಬರುತ್ತಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ನಿರ್ಮಾಣವಗುವ ಗೊಂಬೆ ಮನೆಗಳು. ಸಾಂಪ್ರದಾಯಿಕ ಆಚರಣೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಹಾದಿಯಲ್ಲಿ ಗಮನ ಸೆಳೆಯುವುದು ವಿಶೇಷ. ಇದು ಗೊಂಬೆ ಹಬ್ಬ: ಬಯಲುಸೀಮೆಯ ಜನಪದರಲ್ಲಿ ಗೊಂಬೆ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ದಸರಾ ಬಂತೆಂದರೆ ಈ ಜನಕ್ಕೆ ಎಲ್ಲಿಲ್ಲದ ಸಡಗರ. ಮನೆಮಂದಿಯೆಲ್ಲಾ ಸೇರಿ ತರಾವರಿ ಗೊಂಬೆಗಳನ್ನು ನಡುಮನೆಯಲ್ಲಿ ಅಲಂಕಾರಿಕವಾಗಿ ಕೂರಿಸಿ ಪೂಜಾದಿ ಕಾರ್‍ಯಕ್ರಮಗಳನ್ನು ನಡೆಸುತ್ತಾರೆ. ನಾಡಹಬ್ಬ ದಸರಾ ಮನೆಮನೆಯ ಹಬ್ಬವಾಗಿ ಈ ಬಗೆಯಾಗಿ ಆಚರಿಸಲ್ಪಡುತ್ತದೆ. ಹಿಂದಿನ ಕಾಲದಿಂದಲೂ ಸಂಗ್ರಹಿಸಿ, ಸಂರಕ್ಷಿಸಿಕೊಂಡು ಬಂದ ಚೆಂದದ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದೇ ದೊಡ್ಡ ವೈಭವ. ಅದರಲ್ಲೂ ಮರದಿಂದ ಮಾಡಲ್ಪಟ್ಟ ಪಟ್ಟದ ಗೊಂಬೆಗಳಿಗೆ ರಾಜ-ರಾಣಿಯರ ಧಿರಿಸು ಹಾಕಿ ಪಟ್ಟಕ್ಕೆ ಕೂರಿಸುವ ಮೂಲಕ 9 ದಿನಗಳ ವೈಭವ ಆರಂಭವಾಗುತ್ತದೆ. ಕೆಲ ಮನೆಗಳಲ್ಲಿ ಕಳಶವನ್ನಿಟ್ಟು ಪೂಜಿಸುವ ಸಂಪ್ರದಾಯವೂ ಇದೆ. ಇದರೊಂದಿಗೆ ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ಅನೇಕ ಪುರಾಣಗಳ ಹಲವು ಸನ್ನಿವೇಶಗಳಿಗೂ ಇಲ್ಲಿ ಜೀವಂತಿಕೆ ಬರುವುದುಂಟು. ದೇವಾನು ದೇವತೆಗಳು, ಕಾಡು, ಉದ್ಯಾನ, ನದಿ, ಸರೋವರ, ಅರಮನೆ, ಕೈಲಾಸ, ವೈಕುಂಠ, ದೇವಲೋಕ, ಕ್ರಿಕೆಟ್ ಸ್ಟೇಡಿಯಂ, ಸರ್ಕಸ್ ಮತ್ತಿತರ ಮಾದರಿಗಳ ನಿರ್ಮಾಣ ಇಲ್ಲಿ ನೋಡಸಿಗುತ್ತದೆ. ಹಿರಿಯರಿಂದ ಹಿಡಿದು ಪುಟಾಣಿಗಳವರೆಗೆ ಎಲ್ಲ ವಯೋಮಾನದ ಜನರನ್ನು ಇವು ಆಕರ್ಷಿಸುತ್ತವೆ. ವಿಶೇಷವೇನು?: ಈ ಗೊಂಬೆ ಹಬ್ಬ ವಿಶೇಷಗಳನ್ನು ತನ್ನೊಟ್ಟಿಗೇ ಮೈಗೂಡಿಸಿಕೊಂಡಿರುತ್ತದೆ. ಕೆಲ ಮನೆಗಳಲ್ಲಿ ಪ್ರತಿವರ್ಷ ವಿಶೇಷವಾಗಿ ಪುರಾಣ ರೂಪಕಗಳನ್ನು ಗೊಂಬೆಗಳ ಚಿತ್ತಾರದಲ್ಲಿ ಪ್ರಸ್ತುತಪಡಿಸುವುದುಂಟು. ವೈಕುಂಠ ದರ್ಶನ, ಶ್ರೀಕೃಷ್ಣ ಪಾರಿಜಾತ ಪ್ರಸಂಗ, ಸೀತಾ ಸ್ವಯಂವರ, ರಾಮಾಂಜನೇಯ ಯುದ್ದ, ಅಷ್ಟ ಲಕ್ಷ್ಮಿ ವೈಭವ, ಬ್ರಹ್ಮೋತ್ಸವ, ಮೈಸೂರು ದಸರಾ, ವಿವಾಹ ವೈಭವ ಸೇರಿದಂತೆ ವಿಶೇಷ ಉತ್ಸವಗಳು, ದಸರಾ ವೈಶಿಷ್ಟ್ಯ ಬಿಂಬಿಸುವ ಮಾದರಿಗಳು, ಮದುವೆ ದಿಬ್ಬಣದ ಮಾದರಿಗಳು ರೂಪಗೊಂಡಿವೆ. ಮಹಾಲಯ ಅಮಾವಾಸ್ಯೆಯ ನಂತರದ ದಿನದಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪಟ್ಟದ ಗೊಂಬೆಗಳಿಗೆ ವಿಶೇಷ ಪೂಜೆ ಇರುತ್ತದೆ. ನಂತರ ಚರ್ಪು ಹಂಚುವುದು ಕಡ್ಡಾಯ. ಮಕ್ಕಳಿಗಂತೂ ಸಂಜೆಯಾದರೆ ಗೊಂಬೆ ಕೂರಿಸಿರುವ ಮನೆಗಳಿಗೆ ಭೇಟಿ ನೀಡುವುದೇ ಸಂಭ್ರಮ. ಗೊಂಬೆ ಕೂರಿಸುವುದು ನಮ್ಮ ಸಂಪ್ರದಾಯ. ಮೈಸೂರಿನಲ್ಲಿ ರಾಜದರ್ಬಾರು ನಡೆಯುತ್ತಿದ್ದರೆ ನಮ್ಮನೆಯಲ್ಲಿ ಗೊಂಬೆ ದರ್ಬಾರು ನಡೆಯುತ್ತಿತ್ತು. ಊರು ಸುಭೀಕ್ಷವಾಗಿರಲಿ, ಮನೆಮನೆಗಳೂ ನೆಮ್ಮದಿಯಿಂದಿರಲಿ ಎಂಬ ಆಕಾಂಕ್ಷೆಯಲ್ಲಿ ಇದು ನಡೆಯುತ್ತದೆ. ಪರಸ್ಪರ ನೆರೆಹೊರೆಯ ಜನ ನಿತ್ಯ ಕೂಡಿ ಸಾಂಸ್ಕೃತಿಕವಾಗಿ ಬೆರೆಯುವುದು ಉನ್ನತ ಭಾವನೆಗಳನ್ನು ಬೆಳೆಸುವಲ್ಲಿ ಸಹಕಾರಿ ಎಂಬುದು ಹಿರಿಯರ ಮಾತು. ಈ ಬಾರಿ ದೊಡ್ಡಬಳ್ಳಾಪುರದ ವಿವಿಧ ಮನೆಗಳಲ್ಲಿ ಗೊಂಬೆ ಮನೆಗಳ ಚಿತ್ತಾರ ಮೂಡಿದೆ. ಇಲ್ಲಿನ ನೇಯ್ಗೆಬೀದಿ, ಬ್ರಾಹ್ಮಣರಬೀದಿ, ಸೋಮೇಶ್ವರ ಬಡಾವಣೆ, ಶಾಂತಿನಗರ, ಮಾರುತಿ ನಗರ, ನಗರ್ತರಪೇಟೆ, ಟ್ಯಾಂಕ್‌ರಸ್ತೆ, ಕೊಂಗಾಡಿಯಪ್ಪ ಮುಖ್ಯರಸ್ತೆ ಸೇರಿದಂತೆ ಹಲವು ಬಡಾವಣೆಗಳ ಹತ್ತಾರು ಮನೆಗಳಲ್ಲಿ ಗೊಂಬೆ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಭಾನುವಾರದಿಂದ ಆರಂಭವಾಗಿರುವ ಗೊಂಬೆ ಹಬ್ಬ ವಿಜಯದಶಮಿಯ ದಿನದವರೆಗೆ ಮುಂದುವರಿಯಲಿದೆ. ದೊಡ್ಡಬಳ್ಳಾಪುರದ ಮನೆಮನೆಗಳಲ್ಲಿ ಇದೀಗ ಪರಂಪರೆಯ ಝಲಕ್ ಆರಂಭವಾಗಿದ್ದು, ಕಲರ್‌ಫುಲ್ ಲೋಕ ಸೃಷ್ಠಿಯಾಗಿದೆ. -- ಬಾಕ್ಸ್ ಪ್ಲಾಸ್ಟಿಕ್ ಗೊಂಬೆಗಳ ಹಾವಳಿ ಸಾಂಪ್ರದಾಯಿಕ ಮಣ್ಣಿನ ಗೊಂಬೆಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗೊಂಬೆಗಳು, ಪ್ಲಾಸ್ಟಿಕ್ ಗೊಂಬೆಗಳ ಆರ್ಭಟ ಹೆಚ್ಚಿದೆ. ಇದರೊಟ್ಟಿಗೆ ಚೀನಾ ದೇಶದಿಂದ ಆಮದಾಗುತ್ತಿರುವ ಗೊಂಬೆಗಳೂ ರಾರಾಜಿಸುತ್ತಿರುವುದು ಕಂಡು ಬರುತ್ತಿದೆ. ಅದೇನೇ ಇರಲಿ ಇಂದಿನ ಫ್ಯಾಷನ್ ಭರಾಟೆಯ ಕಾಲದಲ್ಲೂ ಹಿಂದಿನವರು ನಡೆಸಿಕೊಂಡು ಬಂದ ಆಚರಣೆಗಳು ಭಿನ್ನ ಆಲೋಚನೆಗಳ ಜೊತೆಗೂಡಿ ಮುಂದುವರೆಯುತ್ತಿರುವುದು ಗಣನೀಯ.